ಬೆಂಗಳೂರು : ನಗರದ ಹಲವೆಡೆ ನಿನ್ನೆ ಕೂಡ ಧಾರಾಕಾರ ಮಳೆ(Rain) ಯಾಗಿದ್ದು, ಹೆಬ್ಬಾಳ, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು, ಸಿಡಿಲಿನೊಂದಿಗೆ ಭರ್ಜರಿ ಮಳೆಯಾಗಿದೆ.
ವ್ಯಾಪಕ ಮಳೆಯಿಂದಾಗಿ ಮಲ್ಲೇಶ್ವರಂ ಸೆಂಟ್ರಲ್, ಮಂತ್ರಿಮಾಲ್ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು. ಮೆಜೆಸ್ಟಿಕ್, ಶಿವಾನಂದ ಸರ್ಕಲ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಶಿವಾನಂದ ಸರ್ಕಲ್ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಅಂಡರ್ ಪಾಸ್ ಕ್ಲೋಸ್ ಮಾಡದೆ, ಬ್ಯಾರಿಕೇಡ್ ಹಾಕದ ಹಿನ್ನೆಲೆಯಲ್ಲಿ ವಾಹನಗಳು ಮಳೆಯ ನೀರಿನಲ್ಲಿ ಸಿಲುಕಿ ಕೆಲವು ಹೊತ್ತು ಆತಂಕ ಸೃಷ್ಟಿಸಿತ್ತು.
ಜೆಪಿ ನಗರ, ಜಯನಗರ, ಕೋರಮಂಗಲ, ಲಾಲ್ಬಾಗ್, ಬಿಟಿಎಂ ಲೇಔಟ್, ಬನ್ನೇರುಘಟ್ಟ, ಬೇಗೂರು, ದೊಮಲೂರು, ಬನಶಂಕರಿ, ಬಸವನಗುಡಿ, ಬಿನ್ನಿಪೇಟೆ ಹಾಗೂ ಮೈಸೂರು ರಸ್ತೆಯಲ್ಲಿಯೂ ಹೆಚ್ಚಿನ ಮಳೆಯಾಗಿದೆ. ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಮುಂಭಾಗದ ರಸ್ತೆ ಕೆರೆಯಂತಾಗಿದೆ. ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ, ಜನರು ನಿದ್ದೆ ಮಾಡದಂತಾಗಿದೆ. ಗುಡುಗು ಸಹಿತ ಭಾರೀ ಮಳೆಗೆ ಮಳೆಗಾಲದ ಆರಂಭದಲ್ಲಿಯೇ ಜನರು ಪರದಾಟ ನಡೆಸುತ್ತಿದ್ದಾರೆ. ಇನ್ನು ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.








