ಕಣ್ಣಾ ಮುಚ್ಚೆ ಆಡುವ ನೆಪದಲ್ಲಿ ಭಾವಿ ಪತಿಯ ಕತ್ತು ಕುಯ್ದ ವಧು…
ಕಣ್ಣಾಮುಚ್ಚಾಲೆ ಆಟದ ನೆಪದಲ್ಲಿ ಭಾವಿ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿದ ವಧುವೊಬ್ಬಳು, ಭಾವೀ ಪತಿಯ ಕತ್ತು ಕುಯ್ದು ಪರಾರಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮಡುಗುಳ ಮಂಡಲಘಟ್ಟ ರಸ್ತೆಯ ಅಡ್ಡೆಪಲ್ಲಿ ರಾಮಾನಾಯುಡು ಹಾಗೂ ರವಿಕಮಠಂನ ವಿಯ್ಯಪು ಪುಷ್ಪ ಇವರಿಬ್ಬರಿಗೂ ವಿವಾಹ ನಿಶ್ಚಯವಾಗಿತ್ತು. ಆದರೆ ವಧು ಪುಷ್ಪಗೆ ಈ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ರಾಮಾನಾಯುಡು ಜೊತೆ ಆಟವಾಡುವ ನಾಟಕ ಮಾಡಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ಅನಂತರ ಏಕಾಏಕಿ ಚಾಕುವಿನಿಂದ ಕತ್ತು ಕುಯ್ದಿದ್ದಾಳೆ ಎಂದು ತಿಳಿದುಬಂದಿದೆ.
ಮುಂದಿನ ತಿಂಗಳು 20ರಂದು ವಿವಾಹ ನಡೆಸಲು ಎರಡೂ ಕುಟುಂಬಸ್ಥರು ನಿರ್ಧರಿಸಿದ್ದರು. ಹೀಗಾಗಿ ಇಬ್ಬರೂ ಸುತ್ತಾಡಿಕೊಂಡು, ಮದುವೆ ಸಾಮಗ್ರಿ ಖರೀದಿ ಮಾಡಿ ಬರೋಣ ಅಂತ ದ್ವಿಚಕ್ರ ವಾಹನದಲ್ಲಿ ಹೊರಗಡೆ ಹೊರಟಿದ್ದರು.
ವಡ್ಡಾಡಿ ಎಂಬಲ್ಲಿ ಶಾಪಿಂಗ್ ಮುಗಿಸಿ ಕೋಮಲ್ಲಪುಡಿ ಉಪನಗರದಲ್ಲಿರುವ ಬಾಬಾ ಆಶ್ರಮದಲ್ಲಿ ಸಮಯ ಕಳೆಯಲೆಂದು ಗಾಡಿ ನಿಲ್ಲಿಸಿದ್ದರು. ಈ ವೇಳೆ ವಧು ಪುಷ್ಪಾ ಕಣ್ಣಾ ಮುಚ್ಚಾಲೆ ಆಟ ಆಡೋಣ ಅಂತ ಕೇಳಿದ್ದಾಳೆ. ಅದಕ್ಕೆ ವರ ರಾಮ ನಾಯಡು ಒಪ್ಪಿದಾಗ, ತಾನೇ ಆತನ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ.
ಈ ವೇಳೆ ಹುಡುಗನ ಜೊತೆ ಕಣ್ಣಾ ಮುಚ್ಚಾಲೆ ಆಟ ಆಡುವಂತೆ ಹೇಳಿ ಚಾಕುವಿನಿಂದ ಹುಡುಗನ ಕತ್ತು ಕೊಯ್ದಿದ್ದಾಳೆ. ಅದಷ್ಟೇ ಅಲ್ಲದೇ ನಂತರ ತನ್ನ ಸ್ವಂತ ದ್ವಿಚಕ್ರ ವಾಹನದಲ್ಲಿ ಭಾವಿ ಪತಿಯನ್ನು ರವಿಕಮಠದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಗೆ ಸೇರಿಸಿದ ಆಕೆ, ಯುವಕನ ಗಂಟಲಿಗೆ ಏನೋ ಇರಿದಿದೆ ಎಂದು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಇನ್ನು ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಆತನ ಸ್ಥಿತಿ ಗಂಭೀರವಾಗಿದ್ದರಿಂದ ಅನಕಾಪಲ್ಲಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.








