2020ರ ಐಪಿಎಲ್ ವೇಳಾಪಟ್ಟಿಗೆ ಪಂದ್ಯಗಳ ನೇರ ಪ್ರಸಾರದ ವಾಹಿನಿಯಿಂದ ಅಸಮಾಧಾನ…?
ಐಪಿಎಲ್ ಭವಿಷ್ಯ ಬಹುತೇಕ ಇಂದು ನಿರ್ಧಾರವಾಗುತ್ತದೆ. ಐಸಿಸಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ನಿರ್ಧಾರದ ಮೇಲೆ ಐಪಿಎಲ್ ಆಯೋಜನೆ ನಡೆಸಲು ಆಗುತ್ತಾ ? ಇಲ್ಲವೋ ಎಂಬುದು ಗೊತ್ತಾಗುತ್ತೆ. ಈ ನಡುವೆ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನೂ ಸಿದ್ಧಪಡಿಸಿದೆ. ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುವುದರ ಬಗ್ಗೆ ಬಿಸಿಸಿಐ ಅಪೆಕ್ಸ್ ಸಮಿತಿ ಸಭೆಯಲ್ಲೂ ಚರ್ಚೆ ಮಾಡಲಾಗಿದೆ.
ಈ ನಡುವೆ ಬಿಸಿಸಿಐಯ ಐಪಿಎಲ್‍ನ ತಾತ್ಕಾಲಿಕ ವೇಳಾಪಟ್ಟಿಗೆ ಬ್ರಾಡ್ ಕಾಸ್ಟರ್ (ನೇರ ಪ್ರಸಾರ ಹಕ್ಕನ್ನು ಪಡೆದುಕೊಂಡಿರುವ ವಾಹಿನಿ) ಅಸಮಾಧಾನ ವ್ಯಕ್ತಪಡಿಸಿದೆ. ಈಗಾಗಲೇ ಬಿಸಿಸಿಐ ಯುಎಇನಲ್ಲಿ ಐಪಿಎಲ್ ಟೂರ್ನಿಯನ್ನು ಸೆಪ್ಟಂಬರ್ 26ರಿಂದ
ನವೆಂಬರ್ 8ರವರೆಗೆ ನಡೆಸಲು ತೀರ್ಮಾನಿಸಿದೆ. 44 ದಿನಗಳಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿವೆ.
ಆದ್ರೆ ಪಂದ್ಯಗಳ ನೇರ ಪ್ರಸಾರ ಮಾಡುವ ವಾಹಿನಿಯು ಐಪಿಎಲ್‍ನ ಈ ವೇಳಾಪಟ್ಟಿಗೆ ಸಮ್ಮತಿ ಸೂಚಿಸಿಲ್ಲ. ಬದಲಾಗಿ ಟೂರ್ನಿಯನ್ನು ಇನ್ನೊಂದು ವಾರ ವಿಸ್ತರಿಸುವಂತೆ ಬಿಸಿಸಿಐ ಬಳಿ ಮನವಿ ಮಾಡಿಕೊಂಡಿದೆ. ನವೆಂಬರ್ 14ರಂದು ದೀಪಾವಳಿ ಹಬ್ಬವಿರುವುದರಿಂದ ಈ ಸಮಯದಲ್ಲಿ ಪಂದ್ಯಗಳನ್ನು ನಡೆಸಿದ್ರೆ ಹೆಚ್ಚಿನ ಜಾಹಿರಾತು ಪಡೆಯಬಹುದು ಎಂಬುದು ವಾಹಿನಿಯ ಲೆಕ್ಕಚಾರವಾಗಿದೆ.
ಆದ್ರೆ ಬಿಸಿಸಿಐ ಈ ಲೆಕ್ಕಚಾರಗಳಿಗೆ ಒಪ್ಪಿಕೊಳ್ಳುವ ಸಾಧ್ಯತೆಗಳು ಕಮ್ಮಿ ಇದೆ. ಯಾಕಂದ್ರೆ ಐಪಿಎಲ್ ಮುಗಿದ ತಕ್ಷಣ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಶುರುವಾಗಲಿದೆ. ಸದ್ಯದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಾದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನವೆಂಬರ್ 10ರಂದು ಆಸ್ಟ್ರೇಲಿಯಾ ಪ್ರಯಾಣ ಮಾಡಬೇಕಾಗುತ್ತದೆ. ಅಲ್ಲಿದೆ ಕೋವಿಡ್ ಮಾರ್ಗಸೂಚಿಯ ಪ್ರಕಾರ ಆಟಗಾರರು ಕ್ವಾರಂಟೈನ್‍ನಲ್ಲೂ ಇರಬೇಕಾಗುತ್ತದೆ. ಹಾಗೇ ಅಭ್ಯಾಸವನ್ನು ನಡೆಸಬೇಕಾಗುತ್ತದೆ. ಹೀಗಾಗಿ ದೀಪಾವಳಿ ಸಮಯದಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯುವುದು ಅನುಮಾನವಾಗಿದೆ.
ಹೀಗೆ ಐಪಿಎಲ್ ಟೂರ್ನಿಗೆ ಕ್ಷಣಗಣನೇ ಶುರುವಾಗುತ್ತಿದೆ. ಆದ್ರೆ ಅಂತಿಮವಾಗಿ ಈಗ ಐಸಿಸಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದೆ. ಐಸಿಸಿಯ ತೀರ್ಮಾನದ ನಂತರವೇ ಐಪಿಎಲ್‍ಗೆ ಮುಹೂರ್ತ ಫಿಕ್ಸ್ ಆಗಲಿದೆ.








