ಬೆಂಗಳೂರು : ಕೃಷಿ ಸಚಿವ ಬಿ.ಸಿ.ಪಾಟೀಲ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ ಬರೊಬ್ಬರಿ ನೂರುದಿನಗಳು ಪೂರೈಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ “ದಿನ ನೂರು-ಸಾಧನೆ ಹಲವಾರು” ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಸಚಿವ ಬಿ.ಸಿ.ಪಾಟೀಲ್ ನೂರು ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ನೂರು ದಿನಗಳಲ್ಲಿ ಕೃಷಿ ಸಚಿವರು ಮಾಡಿದ ಸಾಧನೆಗಳು ಇಲಾಖೆಯ ಪ್ರಗತಿ, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನಗಳು ಸೇರಿದಂತೆ ನೂರು ದಿನಗಳಲ್ಲಿನ ಸಾಧನೆಗಳನ್ನು ಹೊತ್ತ ಕಿರುಹೊತ್ತಿಗೆ ” ದಿನನೂರು- ಸಾಧನೆ ಹಲವಾರು” ಇದಾಗಿದೆ.
ಮುಂದಿನ ದಿನಗಳಲ್ಲಿ ಕೃಷಿ ಸಚಿವರ ನಡೆಯೇನು? ಇಲಾಖೆಯನ್ನು ಇನ್ನಷ್ಟು ಚುರುಕುಗೊಳಿಸಲು ರೈತರಿಗೆ ಸದಾ ಬೆನ್ನೆಲುಬಾಗಿರಲು ಕೈಗೊಳ್ಳಬಹುದಾದ ಯೋಜನೆಗಳು ಇನ್ನಷ್ಟು ಸಾಧಿಸುವ ಛಲ ಹಂಬಲವನ್ನು ಈ “ದಿನ ನೂರು-ಸಾಧನೆ ಹಲವಾರು” ಕಿರುಹೊತ್ತಿಗೆ ಹೊಂದಿದೆ.
ಉದ್ಘಾಟೆನೆ ಮಾಡಿದ ಬಳಿಕ ಮಾತನಾಡಿದ ಬಿಎಸ್.ವೈ ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಬಿ.ಸಿ.ಪಾಟೀಲರು ಸ್ವತಃ ಕೃಷಿಕರಾಗಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಜನಮೆಚ್ಚುಗೆ ಪಡೆದ ನಟನಾಗಿ ಈಗ ಸಂಪುಟದಲ್ಲಿ ಕ್ರಿಯಾಶೀಲ ಸಚಿವರಾಗಿರುವುದು ಸಂತಸ. ಕೋವಿಡ್ ಸಂದರ್ಭದಲ್ಲಿ ರೈತಾಪಿ ವರ್ಗದಲ್ಲಿ ಕಂಡುಬಂದ ತೊಂದರೆಗಳಿಗೆ ಪರಿಹಾರ ನೀಡುವ ಮೂಲಕ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಹೊಸಹೊಸ ವಿಚಾರಗಳ ಚಿಂತನಮಂಥನಕ್ಕೆ ನೂತನ ಆವಿಷ್ಕಾರಕ್ಕೆ ಬಿ.ಸಿ.ಪಾಟೀಲರು ಸ್ಪೂರ್ತಿದಾಯಕರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಸಚಿವ ಬಿಸಿ ಪಾಟೀಲ್, ಈ ನೂರುದಿನಗಳಲ್ಲಿ ನಾನು ಇಟ್ಟಿರುವ ಹೆಜ್ಜೆಗಳನ್ನು ಈ ಕಿರುಹೊತ್ತಿಗೆ ಹೊಂದಿದೆ. ಇದು ಸಾಧನೆಯಲ್ಲ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ ಹೆಜ್ಜೆಗಳು. ಸರ್ಕಾರ ಎಂದಿಗೂ ರೈತರ ಜೊತೆಯಿದೆ. ಎಂದಿಗೂ ಅನ್ನದಾತರೊಂದಿಗೆ ತಾವಿದ್ದು, ಕೃಷಿ ಅಭಿವೃದ್ಧಿಗೆ ತಾವು ದುಡಿಯುವುದಾಗಿ ತಿಳಿಸಿದ್ದಾರೆ.








