ಬೆಂಗಳೂರು: ನಗರದಲ್ಲಿ ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ಮಾರಾಟ ಜಾಲದ ವಿರುದ್ಧ ಸಮರ ಸಾರಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML), ನಿನ್ನೆ ನಗರದಾದ್ಯಂತ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸುಮಾರು 9,567 ಕೆ.ಜಿ. (9.5 ಟನ್) ಪ್ಲಾಸ್ಟಿಕ್ ವಶಕ್ಕೆ ಪಡೆದು, ₹7.38 ಲಕ್ಷ ದಂಡ ವಿಧಿಸಲಾಗಿದ್ದು, ಕೆ.ಆರ್. ಮಾರುಕಟ್ಟೆಯಲ್ಲಿದ್ದ ಅಕ್ರಮ ದಾಸ್ತಾನು ಮಳಿಗೆಯನ್ನು (ಗೋಡೌನ್) ಸೀಜ್ ಮಾಡಲಾಗಿದೆ.

ಕೆ.ಆರ್. ಮಾರುಕಟ್ಟೆ ಗೋಡೌನ್ ಸೀಜ್, ಒಂದೇ ದಿನ ₹7.38 ಲಕ್ಷ ದಂಡ ಸಂಗ್ರಹ
BSWMLನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ, (ಭಾ.ಆ.ಸೇ) ಮತ್ತು ಮುಖ್ಯ ಕಾರ್ಯಚರಣೆ ಅಧಿಕಾರಿಯಾದ ರಮಾಮಣಿ ವಿ.ಕೆ.(ಕೆ.ಎಂ.ಎ.ಎಸ್) ರವರ ನೇರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ನಗರದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಸಹ, ಕೆಲವು ಉತ್ಪಾದಕರು ಮತ್ತು ದಾಸ್ತಾನುದಾರರು ಕಾನೂನುಬಾಹಿರವಾಗಿ ಪ್ಲಾಸ್ಟಿಕ್ ಕವರ್‌ಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಈ ದಾಳಿಗಳನ್ನು ಆಯೋಜಿಸಲಾಗಿತ್ತು.

ಒಂದು ದಿನದ ಕಾರ್ಯಾಚರಣೆಯ ವಿವರ:
ನಿನ್ನೆ ನಡೆದ ನಗರವ್ಯಾಪಿ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಒಟ್ಟು 158 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ:
* 9,567 ಕೆ.ಜಿ. ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
* ಅಕ್ರಮ ಚಟುವಟಿಕೆ ನಡೆಸುತ್ತಿದ್ದವರಿಂದ ಒಟ್ಟು ₹7,38,700 ದಂಡವನ್ನು ಸಂಗ್ರಹಿಸಲಾಗಿದೆ.
* ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ಲಾಸ್ಟಿಕ್ ದಾಸ್ತಾನು ಮಾಡಲಾಗಿದ್ದ ಒಂದು ಗೋಡೌನ್‌ಗೆ ಬೀಗಮುದ್ರೆ ಹಾಕಲಾಗಿದೆ.

ಸಾರ್ವಜನಿಕರಿಗೆ ಮತ್ತು ವ್ಯಾಪಾರಿಗಳಿಗೆ ಎಚ್ಚರಿಕೆ:
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ BSWML, “ನಿಷೇಧಿತ ಪ್ಲಾಸ್ಟಿಕ್ ವಿರುದ್ಧದ ನಮ್ಮ ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯಲಿದೆ. ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ತಿಳಿಸಿದೆ.
ಸಾರ್ವಜನಿಕರು ಮಾರುಕಟ್ಟೆಗೆ ತೆರಳುವ ಮುನ್ನ ಕಡ್ಡಾಯವಾಗಿ ಕೈಚೀಲವನ್ನು ತೆಗೆದುಕೊಂಡು ಹೋಗಬೇಕು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಟ್ಟೆ ಅಥವಾ ಕಾಗದದ ಚೀಲಗಳನ್ನು ಬಳಸಿ ಸಹಕಾರ ನೀಡಬೇಕೆಂದು ಮನವಿ ಮಾಡಲಾಗಿದೆ.








