ಬೆಂಗಳೂರು: ಇನ್ನು ಮುಂದೆ ಕೊರೊನಾ ನಿಯಂತ್ರಣದ ಕುರಿತಾಗಿ ಸಾರ್ವಜನಿಕರಿಂದ ಯಾವುದೇ ರೀತಿಯ ದೂರು ಬಂದರೂ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಗೃಹಕಚೇರಿ ಕೃಷ್ಣದಲ್ಲಿ ರಾಜರಾಜೇಶ್ವರಿ ವಲಯದ ಉಸ್ತುವಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣ ಕುರಿತಾಗಿ ಸಭೆ ನಡೆಸಿದ ಬಿಎಸ್ ವೈ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಎಷ್ಟು ಸಭೆಗಳನ್ನು ನಡೆಸಬೇಕು?. ಪ್ರತಿದಿನ ಸಭೆಗಳನ್ನು ನಡೆಸುತ್ತಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರುವುದು ಯಾವಾಗ? ಜನ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಇನ್ನೂವರೆಗೂ ಕೊರೊನಾ ಹತೋಟಿಗೆ ಯಾಕೆ ಬರುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆಗಿದ್ದಾರೆ. 
ಇದೇ ವೇಳೆ ಮಾತನಾಡಿರುವ ಸಿಎಂ ಇನ್ನು ಮುಂದೆ ವಲಯಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬಂದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇನೆ ಈವರೆಗೂ ನಾನು ಯಾವುದೇ ಅಧಿಕಾರಿಗಳನ್ನು ಟೀಕೆ ಇಲ್ಲವೇ ದೂಷಣೆ ಮಾಡಿಲ್ಲ. ಆದರೆ ನಿಮ್ಮ ಕೆಲಸ ನನಗೆ ತೃಪ್ತಿ ತಂದಿಲ್ಲ. ಏನೇ ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು, ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಿ ಶತಾಯಗತಾಯ ಕೊರೊನಾವನ್ನು ನಿಯಂತ್ರಣ ಮಾಡಲೇಬೇಕು. ಸುಖಾಸುಮ್ಮನೆ ಏನೇನೋ ಸಬೂಬುಗಳನ್ನು ಹೇಳಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.







