ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರಂತೆ. ಈ ಬಗ್ಗೆ ಬಿಜೆಪಿ ಪಾಳಯದ ನಾಯಕರೇ ವಿಧಾನಸಭೆಯ ಮೊಗಸಾಲೆಯಲ್ಲಿ ಮಾತನಾಡಿಕೊಂಡಿದ್ದಾರೆ. ಅಧಿವೇಶನ ಮುಗಿದ ನಂತರ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹಮತ ವ್ಯಕ್ತಪಡಿಸುತ್ತಾರೆ ಎಂಬ ಭಾವನೆ ಬಿಜೆಪಿ ಪಾಳಯದಲ್ಲಿದೆ.
ಬಿಎಸ್ ವೈಗೆ ತಪ್ಪದ ಸಂಪುಟ ಸಂಕಟ!
ಮೈತ್ರಿ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಬಿಎಸ್ ವೈಗೆ ಅಂದಿನಿಂದ ಇಂದಿನವರೆಗೂ ಸಂಕಷ್ಟಗಳು ಎದುರಾಗುತ್ತಲೇ ಇವೆ. ಮೊದಲು ಸಂಪುಟ ರಚನೆಗೆ ಪರದಾಡಿದ ಸಿಎಂ ನಂತರ ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಮಂತ್ರಿಗಿರಿ ನೀಡಲು ನಾನಾ ಕಸರತ್ತು ನಡೆಸಬೇಕಾಯಿತು. ಕೊನೆಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಸಂಪುಟ ವಿಸ್ತರಿಸಿದ ಸಿಎಂಗೆ ಖಾತೆ ಹಂಚಿಕೆ ತಲೆನೋವಾಯಿತು. ಅಂತೂ ಇಂತೂ ಎಲ್ಲರನ್ನು ಮನವೊಲಿಸಿ ಖಾತೆ ಹಂಚಿಕೆ ಮಾಡಿದ ಸಿಎಂಗೆ ಈ ಮಧ್ಯೆ ಸ್ವಪಕ್ಷದವರ ಅಸಮಾಧಾನ ಮತ್ತೆ ತಲೆ ಬಿಸಿಗೆ ಕಾರಣವಾಗಿದೆ. ಹೀಗಾಗಿ ಸಿಎಂ ಬಿಎಸ್ ವೈ ಮತ್ತೆ ಸಂಪುಟ ವಿಸ್ತರಣೆಗೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಚರ್ಚೆ
ರಾಜ್ಯ ಬಿಜೆಪಿಯಲ್ಲಿ ನಾನಾ ಗೊಂದಲಗಳ ಮಧ್ಯೆ ಅಸಮಾಧಾನ ಹೊಗೆ ಆಡುತ್ತಿದ್ದು, ಆ ಹೊಗೆ ಬೆಂಕಿ ಆಗುವುದನ್ನು ತಡೆಯಲು ರಾಜ್ಯಕ್ಕೆ ಜೆ.ಪಿ ನಡ್ಡಾ ಅವರು ಭೇಟಿ ನೀಡಲಿದ್ದಾರೆ. ಈ ವೇಳೆ ನಡ್ಡಾ ಅವರು ಅತೃಪ್ತಗೊಂಡಿರುವ ಶಾಸಕರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನು ಸಿಎಂ ಬಿಎಸ್ ವೈ ಕೂಡ ತಮ್ಮ ಸಂಪುಟ ವಿಸ್ತರಣೆ ನಿರ್ಧಾರದ ಬಗ್ಗೆ ನಡ್ಡಾ ಜೊತೆ ಚರ್ಚಿಸಲಿದ್ದು, ಇದಕ್ಕೆ ಜೆ.ಪಿ.ನಡ್ಡಾ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.








