ಬೆಂಗಳೂರು: ಅಧಿಕಾರದ ಚುಕ್ಕಾಣಿ ಹಿಡಿಯಲು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಮಾಡಿದ ಸರ್ಕಸ್, ಹೋರಾಟ, ತಂತ್ರಗಾರಿಕೆ, ರಿಸ್ಕ್ ಅವರಿಂದ ಸಾಧ್ಯವೇ ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಬೇರೊಬ್ಬರಿಂದ ಅಸಾಧ್ಯ ಎಂದರೆ ತಪ್ಪಾಗಲಾರದು. ಕಳೆದ ವರ್ಷ 26ರಂದು ಅಧಿಕಾರಕ್ಕೆ ಬಂದ ಬಿ.ಎಸ್ ಯಡಿಯೂರಪ್ಪ ಅವರಿಗೆ ಎದುರಾದ ಸವಾಲುಗಳು ಒಂದೇ ಎರಡೇ…ದೋಸ್ತಿ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಹುಮ್ಮಸ್ಸಿನಲ್ಲಿದ್ದ ಬಿಎಸ್‍ವೈಗೆ ಶುರುವಾಗಿದ್ದು ಮಂತ್ರಿಗಿರಿಗಾಗಿ ಬಂಡಾಯ, 20 ಜಿಲ್ಲೆಗಳ ಪ್ರವಾಹ ಹಾಗೂ ಹೆಮ್ಮಾರಿ ಕೊರೊನಾ.
ಹೀಗಾಗಿ ಸಿಎಂ ಯಡಿಯೂರಪ್ಪ ಅವರ ಒಂದು ವರ್ಷದ ಈ ಅಧಿಕಾರದ ಅವಧಿ ಸಾಧನೆಗಿಂತ ಸವಾಲುಗಳ ವರ್ಷ. 2018ರ ಮೇನಲ್ಲಿ 104 ಸ್ಥಾನಗಳೊಂದಿಗೆ ಬಿಜೆಪಿಗೆ ಪೂರ್ಣ ಬೆಂಬಲ ಇಲ್ಲದೆ ಹೋದಾದ ಹಠಕ್ಕೆ ಬಿದ್ದು ಸರ್ಕಾರ ರಚನೆ ಮಾಡಿದರು. ಆದರೆ, ವಿಶ್ವಾಸಮತ ಯಾಚನೆ ಮಾಡಲು ಆಗದೇ ಕೇವಲ 3 ದಿನಕ್ಕೆ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ಅಧಿಕಾರದಿಂದ ವಂಚಿತರಾದರೂ ಬಿ.ಎಸ್ ಯಡಿಯೂರಪ್ಪ ಸುಮ್ಮನೇ ಕೂರಲಿಲ್ಲ, ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ ಮತ್ತೊಮ್ಮೆ ಅಧಿಕಾರ ಹಿಡಿಯುವ ಮಾರ್ಗಗಳತ್ತ ತಂತ್ರಗಾರಿಕೆ ಹೆಣೆಯ ತೊಡಗಿದರು.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಮುಗಿಯುವಷ್ಟರಲ್ಲಿ ಎರಡೂ ಪಕ್ಷಗಳ ಶಾಸಕರು, ಮುಖಂಡರ ಅಸಮಧಾನ, ಲಾಬಿ ಹೆಚ್ಚತೊಡಗಿತು. ಮೈತ್ರಿ ಸರ್ಕಾರದ ನಾಯಕರ ನಡುವೆಯೇ ಅಪನಂಬಿಕೆ ಶುರುವಾಯಿತು. ಬಹಿರಂಗವಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರೂ ಆಂತರ್ಯದಲ್ಲಿ ಅನುಮಾನದ ಹುತ್ತ ಬೆಳೆಯತೊಡಗಿತು. ಅನುದಾನ ಹಂಚಿಕೆಯ ತಾರತಮ್ಯದಿಂದ ಶುರುವಾದ ಅಸಮಾಧಾನದ ಬೇಗುದಿ ಶಾಸಕರ ಬಂಡಾಯ ಸ್ಫೋಟಗೊಳ್ಳುವಂತೆ ಮಾಡಿತು. ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಡಿದ್ದು ಯಡಿಯೂರಪ್ಪ ಅವರ ರಾಜಕೀಯ ತಂತ್ರಗಾರಿಕೆ.
ಯಶಸ್ವೀಯಾಯ್ತು ಆಪರೇಷನ್ ಕಮಲ..!
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ದೋಸ್ತಿಗಳ ನಡುವೆ ಹೊಂದಾಣಿಕೆಯ ಬಿರುಕು ಕಾಣಿಸಿಕೊಳ್ಳುತ್ತಿದ್ದಂತೆ ಯಡಿಯೂರಪ್ಪ ಜಾಗೃತರಾದರು. ಕಾಂಗ್ರೆಸ್‍ನ ಕೆಲ ಶಾಸಕರು ಬಹಿರಂಗವಾಗಿಯೇ ಸಿಎಂ ಆಗಿದ್ದ ಕುಮಾರಸ್ವಾಮಿ ವಿರುದ್ಧ ಬಂಡಾಯ ಘೋಷಣೆ ಮಾಡಿದರು. ದೇವೇಗೌಡರ ಪ್ರಭಾವದ ಕಾರಣ ಜೆಡಿಎಸ್‍ನ ಕೆಲಸ ಶಾಸಕರು ಬಹಿರಂಗವಾಗಿ ತೋರಿಸಿಕೊಳ್ಳದೇ ಹೊರತು ಆಂತರ್ಯದಲ್ಲಿ ಹೆಚ್‍ಡಿಕೆ ನಾಯಕತ್ವದಿಂದ ದೂರವಾಗಲು ಆರಂಭಿಸಿದರು.
ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅನುಸರಿಸಿದ್ದ ಆಪರೇಷನ್ ಕಮಲದ ಪ್ರಯೋಗಕ್ಕೆ 2019ರಲ್ಲಿ ಮತ್ತೆ ಚಾಲನೆ ಕೊಟ್ಟರು. ಸಚಿವ ಸ್ಥಾನಕ್ಕಾಗಿ ಹಪಹಪಿಸುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅತೃಪ್ತ ಶಾಸಕರನ್ನು ತಮ್ಮತ್ತ ಸೆಳೆಯುವ ಬ್ಲೂಪ್ರಿಂಟ್ ತಯಾರಿಸಿಕೊಂಡರು.
104 ಸ್ಥಾನ ಪಡೆದಿದ್ದ ಬಿಜೆಪಿ ಬಹುಮತ ಪಡೆಯಬೇಕಾದರೆ ಇನ್ನೂ 9 ಸ್ಥಾನಗಳ ಅಗತ್ಯವಿತ್ತು. ಆದರೆ, 9 ಶಾಸಕರ ಬೆಂಬಲ ಪಡೆದರೂ ಮೈತ್ರಿ ಸರ್ಕಾರದ ಸರಳ ಬಹುಮತದ ಸಂಖ್ಯೆ ಕಡಿಮೆಯಾಗಲಿಲ್ಲ. ಹೀಗಾಗಿ ದೊಡ್ಡಮಟ್ಟದಲ್ಲೇ ಕಾಂಗ್ರೆಸ್-ಜೆಎಎಸ್ ಶಾಸಕರನ್ನು ಸೆಳೆಯುವ ರಹಸ್ಯ ಕಾರ್ಯಾಚರಣೆಯನ್ನು ತೆರೆಮರೆಯಲ್ಲಿ ಆರಂಭಿಸಿದರು.
ಈ ಕಾರ್ಯಾಚರಣೆ ಎಷ್ಟರ ಮಟ್ಟಿಗೆ ರಹಸ್ಯವಾಗಿತ್ತು ಎಂದು ಖುದ್ದು ಬಿಜೆಪಿಯ ಹಿರಿಯ ನಾಯಕರಿಗೆ ಅದರ ಸುಳಿವೇ ಸಿಗದಂತೆ ನೋಡಿಕೊಂಡರು. ಹೊಸಪೇಟೆ ಶಾಸಕ ಆನಂದ್‍ಸಿಂಗ್ ರಾಜೀನಾಮೆ ಮೂಲಕ ದೋಸ್ತಿ ಸರ್ಕಾರದ ಪತನಕ್ಕೆ ಕೌಂಟ್‍ಡೌನ್ ಶುರುವಾಯಿತು. ಮುಂದೆ 18 ಶಾಸಕರ ರಾಜೀನಾಮೆಯೊಂದಿಗೆ ಪರ್ಯಾವಸಾನಗೊಂಡಿತು. ಅನಿವಾರ್ಯವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟು ಕೆಳಗಿಳಿಯಲೇ ಬೇಕಾಯಿತು.
20 ಜಿಲ್ಲೆಗಳಲ್ಲಿ ಕಂಡು ಕೇಳರಿಯದ ಪ್ರವಾಹ
ಹಠಕ್ಕೆ ಬಿದ್ದ ತ್ರಿವಿಕ್ರಮನಂತೆ ಅಧಿಕಾರದ ಚುಕ್ಕಾಣಿ ಹಿಡಿದ ಖುಷಿಯಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೊದಲು ಎದುರಾಗಿದ್ದೆ ಪ್ರವಾಹ. ಕಳೆದ ವರ್ಷ ಆಗಷ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳು ಸೇರಿದಂತೆ 20 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕು ನಲುಗಿ ಹೋದವು.
ಹಲವು ಮಂದಿ ಪ್ರಾಣ ಕಳೆದುಕೊಂಡು. ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ರೈತರ ಫಸಲು ನಾಶವಾಯಿತು. ಊರುಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಕಣ್ಣೆದುರೇ ಮನೆಗಳು ಕುಸಿದು ಹೋದವು. ಲಕ್ಷಾಂತರ ಮಂದಿ ನಿರಾಶ್ರಿತರಾದರು. ಶತಮಾನದ ಪ್ರವಾಹಕ್ಕೆ ಸಿಲುಕಿದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಪುನಶ್ಚೇತನ ಅಷ್ಟು ಸುಲಭದ್ದೂ ಆಗಿರಲಿಲ್ಲ. ಆ ಹೊಡೆತದಿಂದ ಮೇಲೇಳುವ ಪ್ರಯತ್ನದಲ್ಲಿರುವಾಗಲೇ ಕಾಡಿದ್ದು ಹೆಮ್ಮಾರಿ ಕೊರೊನಾ..
ಹಿಂಡಿ ಹಿಪ್ಪೆ ಮಾಡಿದ ಕೊರೊನಾ, ಲಾಕ್‍ಡೌನ್..!
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 6 ತಿಂಗಳು ಕಳೆಯುಷ್ಟರಲ್ಲೇ ಧುತ್ತೆಂದು ಎದುರಾಗಿದ್ದು ಮಹಾಮಾರಿ ಕೊರೊನಾ ವೈರಸ್. ಮಾರ್ಚ್ ತಿಂಗಳಲ್ಲಿ ಒಂದೆರಡು ಪ್ರಕರಣಗಳಿಂದ ಶುರುವಾದ ಹೆಮ್ಮಾರಿಯ ಓಟ ಸರ್ಕಾರದ ಲೆಕ್ಕಾಚಾರಗಳನ್ನೇ ತಲೆಕೆಳಗು ಮಾಡಿ ಈಗ ಲಕ್ಷ ಗಡಿದಾಟುವ ಸನಿಹದಲ್ಲಿದೆ.
ಮಾರ್ಚ್ ತಿಂಗಳಲ್ಲಿ ಕೆಲವೇ ಕೆಲವು ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿದ್ದಾಗಲೇ ದೇಶಾದ್ಯಂತ ಲಾಕ್‍ಡೌನ್ ಮಾಡಲಾಯಿತು.
21 ದಿನಗಳ ಲಾಕ್‍ಡೌನ್‍ನಿಂದ ಕೊರೊನಾ ಹೆಮ್ಮಾರಿಯನ್ನು ಬಡಿದೋಡಿಸಬಹುದೆಂಬ ಸರ್ಕಾರದ ಲೆಕ್ಕಾಚಾರ ತಲೆ ಕೆಳಗಾಗತೊಡಗಿತು. ದಿನದಿಂದ ದಿನಕ್ಕೆ ಕೊರೊನಾ ನಾಗಾಲೋಟ ಮುಂದುವರೆಯಿತು. ಲಾಕ್‍ಡೌನ್ ಪರಿಣಾಮ ರಾಜ್ಯದ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತು. ಕೆಲಸವಿಲ್ಲದೆ ಲಕ್ಷಾಂತರ ಮಂದಿ ಬೀದಿ ಪಾಲಾದರು. ವಲಸೆ ಕಾರ್ಮಿಕರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದರು. ಹಣ್ಣು, ತರಕಾರಿ ಬೆಳೆದ ರೈತರು ಫಸಲು ಮಾರಾಟವಾಗದೇ ಬೆಳೆಯನ್ನೇ ನಾಶ ಮಾಡಿ ಆತ್ಮಹತ್ಯೆಗೆ ಮುಂದಾದರು.
ಈ ಸಂದಿಗ್ಧ ಪರಿಸ್ಥಿತಿಯನ್ನು ಸವಾಲಾಗಿ ತೆಗೆದುಕೊಂಡ ಯಡಿಯೂರಪ್ಪ ಲಾಕ್‍ಡೌನ್‍ನ್ನು ಹಂತ-ಹಂತವಾಗಿ ಸಡಿಲಗೊಳಿಸಿದರು. ಆರ್ಥಿಕ ಚಟುವಟಿಕೆಗೆ ಚಾಲನೆ ಕೊಡಲು ಲಾಕ್‍ಡೌನ್ ಸಡಿಲ ಮಾಡಿದ ಪರಿಣಾಮ ಕೊರೊನಾ ರಣಕೇಕೆ ಹಾಕಲು ಆರಂಭಿಸಿತು. ಮಾರ್ಚ್ ತಿಂಗಳಲ್ಲಿ 10-20 ಸಂಖ್ಯೆಯಲ್ಲಿದ್ದ ಕೊರೊನಾ ಸೋಂಕಿತರ ಈಗ ಲಕ್ಷದ ಗಡಿಯಲ್ಲಿದೆ. ದಿನದಿಂದ ದಿನಕ್ಕೆ ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಸಂಪುಟ ಸರ್ಕಸ್, ಬಂಡಾಯ..ಉಪಚುನಾವಣೆ..!
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶುರುವಾಗಿದ್ದೇ ಶಾಸಕರ ಬಂಡಾಯ. ಮಂತ್ರಿ ಸ್ಥಾನಕ್ಕಾಗಿ ಶಾಸಕರ ಬಂಡಾಯ ಎಷ್ಟಿತ್ತೆಂದರೆ ಸರ್ಕಾರದ ವಿರುದ್ಧವೇ ಶಾಸಕರು ಪ್ರತಿಭಟನೆ, ಬಂದ್ ಮಾಡಿಸುವ ಹಂತಕ್ಕೆ ಹೋಯಿತು. ಉಮೇಶ್ ಕತ್ತಿ ಅವರ ಬಂಡಾಯ ಯಡಿಯೂರಪ್ಪ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಯಡಿಯೂರಪ್ಪ-ಬಿ.ಎಲ್ ಸಂತೋಷ್ ಬಣದ ನಡುವೆ ತಿಕ್ಕಾಟ ಶುರುವಾಯಿತು. ಹೀಗಾಗಿ ಮಂತ್ರಿಮಂಡಲ ರಚನೆಗೆ ಯಡಿಯೂರಪ್ಪ ಒಂದು ತಿಂಗಳು ಸರ್ಕಸ್ ಮಾಡಬೇಕಾದ ಸ್ಥಿತಿ ಎದುರಾಗಿತ್ತು.
ಉಪಚುನಾವಣೆಯಯಲ್ಲಿ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳನ್ನು ಗೆದ್ದುಕೊಂಡು ಬಂದರು. ಮೊದಲೇ ಆಶ್ವಾಸನೆ ನೀಡಿದಂತೆ ಕಾಂಗ್ರೆಸ್-ಜೆಡಿಎಸ್‍ನಿಂದ ಬಂದು ಶಾಸಕರಾದವರಿಗೆ ಮಂತ್ರಿ ಸ್ಥಾನ ನೀಡಿ ಕೊಟ್ಟ ಮಾತು ಉಳಿಸಿಕೊಂಡರು. ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನದ ಬೇಗುಗಿದೆ ಕೊರೊನಾ ತಣ್ಣೀರೆಚಿತು. ಹೀಗಾಗಿ ಈ ವಿಚಾರ ಸದ್ಯಕ್ಕೆ ಮುಂಚೂಣಿಗೆ ಬರದೇ ಹೋದರು, ರಾಜ್ಯದಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಮಂತ್ರಿಗಿರಿ ಲಾಬಿಯ ನಿಜವಾದ ಆಟಕ್ಕೆ ಚಾಲನೆ ಸಿಗುವ ಸಾದ್ಯತೆ ಇದೆ.
ಒಟ್ಟಾರೆ, ಮುಖ್ಯಮಂತ್ರಿಯಾಗಿ ಈ ಒಂದು ವರ್ಷದ ಅವಧಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಾಧನೆಯ ಹರ್ಷದ, ಸಂಭ್ರಮದ ವರ್ಷವಾಗದೇ ಸವಾಲಿನ ವರ್ಷವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.