====ಮಧ್ಯಾಹ್ನ 12ಗಂಟೆಗೆ ಸರ್ಕಾರಕ್ಕೆ ಡೆಡ್ಲೈನ್===
====ಮುಷ್ಕರ ಕೈಬಿಡಲು ಸಿಎಂ ಬಿಎಸ್ವೈ ಮನವಿ===
ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯದ ಲಕ್ಷಾಂತರ ಸಾರಿಗೆ ನೌಕರರು, ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಬೆಂಗಳೂರು ನಗರದ ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ನಿಗಮಗಳ ನೌಕರರು ಬಸ್ಗಳನ್ನು ರಸ್ತೆಗಿಳಿಸದೆ ಪ್ರತಿಭಟನೆ ಆರಂಭಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ನಗರದ ಬಹುತೇಕ ಬಸ್ ನಿಲ್ದಾಣಗಳಲ್ಲಿ ಚಾಲಕರು ಹಾಗೂ ನಿರ್ವಾಹಕರು ಡಿಪೋಗಳಿಂದ ಬಸ್ಗಳನ್ನು ಹೊರಗೆ ತೆಗೆದಿಲ್ಲ. ಹೀಗಾಗಿ ಎಲ್ಲಾ ಬಸ್ ನಿಲ್ದಾಣಗಳು ಖಾಲಿ ಖಾಲಿ ಹೊಡೆಯುತ್ತಿವೆ.
ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲೂ ಸಾರಿಗೆ ನೌಕರರು ಬಸ್ಗಳನ್ನು ರಸ್ತೆಗಳಿಸದೆ ಮುಷ್ಕರ ನಡೆಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿರುವ ನೂರಾರು ಬಿಎಂಟಿಸಿ ಹಾಗೂ ಕೆಎಸ್ಆರ್ಸಿ ಸಿಬ್ಬಂದಿ ಕೂಡ ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಬಸ್ಗಳು ಇಲ್ಲದೆ ಎಲ್ಲಾ ನಿಲ್ದಾಣಗಳು ಬಿಕೋ ಎನ್ನುತ್ತಿವೆ.
ಬಸ್ಗಳಿಲ್ಲದೆ ಪ್ರಯಾಣಿಕರ ಪರದಾಟ
ನಿನ್ನೆ ತಡರಾತ್ರಿ ಸಾರಿಗೆ ನೌಕರರು ಮುಷ್ಕರ ಆರಂಭಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಬಸ್ಗಳ ಸಂಚಾರದ ಬಗ್ಗೆ ಮಾಹಿತಿ ಇಲ್ಲದೆ ನಿಲ್ದಾಣಗಳಿಗೆ ಬಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.
ದೂರದ ಊರುಗಳಿಗೆ, ಕಚೇರಿ, ಗಾರ್ಮೆಂಟ್ಸ್, ತುರ್ತು ಕೆಲಸಗಳಿಗೆಂದು ಬಸ್ ನಿಲ್ದಾಣಗಳಿಗೆ ಬಂದ ಪ್ರಯಾಣಿಕರು ಬಸ್ಗಳಿಲ್ಲದೆ ದಿಕ್ಕು ತೋಚದಂತಾಗಿದ್ದು, ಪರದಾಟ ನಡೆಸುತ್ತಿದ್ದಾರೆ.
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಎಂಡಿಗಳು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರೂ ಯಾವುದೇ ಪ್ರಯತ್ನ ಆಗಿಲ್ಲ. ಒಂದೇ ಒಂದು ಬಸ್ ಕೂಡ ರಸ್ತೆಗೆ ಇಳಿದಿಲ್ಲ. ಹೀಗಾಗಿ ಪ್ರಯಾಣಿಕರು ದಿಕ್ಕು ತೋಚದಂತಾಗಿದ್ದಾರೆ.
ಬಸ್ ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ನೆಲಮಂಗಲದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ ಘಟನೆಯೂ ನಡೆದಿದೆ.
12ಗಂಟೆಗೆ ಸರ್ಕಾರಕ್ಕೆ ಡೆಡ್ಲೈನ್..!
ಇಂದಿನಿಂದ ಮುಷ್ಕರ ಆರಂಭಿಸಿರುವ ಸಾರಿಗೆ ನೌಕರರು ಸರ್ಕಾರಕ್ಕೆ ಮಧ್ಯಾಹ್ನ 12ಗಂಟೆವರೆಗೆ ಡೆಡ್ಲೈನ್ ನೀಡಿದ್ದಾರೆ. 12ಗಂಟೆಯೊಳಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.
ಧರಣಿ ನಡೆಸುತ್ತಿರುವ ಎಲ್ಲಾ ನೌಕರರು ಫ್ರೀಡಂಪಾರ್ಕ್ಗೆ ತೆರಳುತ್ತೇವೆ. ಅಲ್ಲೇ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಷ್ಕರ ಕೈಬಿಡುವಂತೆ ಸಿಎಂ ಬಿಎಸ್ವೈ ಮನವಿ
ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕು. ಕೋರೊನಾ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಸಾರಿಗೆ ನಿಗಮಗಳೂ ಕೂಡ ಸಂಕಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದು ಕಷ್ಟ. ಹೀಗಾಗಿ ಮುಷ್ಕರ ನಡೆಸುವುದು ಸರಿಯಾದ ಕ್ರಮ ಅಲ್ಲ. ಕೂಡಲೇ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel