ಸಿ.ಎಂ.ಇಬ್ರಾಹಿಂ, ತನ್ವೀರ್, ಜಮೀರ್ ಯಾರೇ ಸಿಎಂ ಆದ್ರೂ ನನ್ನ ಬೆಂಬಲವಿದೆ : ಸಿ.ಟಿ.ರವಿ
ನವದೆಹಲಿ : ಸಿ.ಎಂ.ಇಬ್ರಾಹಿಂ, ತನ್ವೀರ್ ಸೇಠ್, ಜಮೀರ್ ಅಹಮ್ಮದ್ ಯಾರೇ ಮುಖ್ಯಮಂತ್ರಿಯಾದರೂ ನನ್ನ ಬೆಂಬಲವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ನ ಸಿಎಂ ಆಕಾಂಕ್ಷಿಗಳ ಬಗ್ಗೆ ಪ್ರತಿಕ್ರಿಯಿಸಿ ಈ ಮೇಲಿನ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಚುನಾವಣೆ ನಡೆಯಲು ಇನ್ನೂ ಎರಡು ವರ್ಷ ಬೇಕು. ಸೋತು ಸುಣ್ಣವಾಗಿರುವ ಕಾಂಗ್ರೆಸ್ ಚುನಾವಣೆ ಗೆಲ್ಲಲು ತಿಣುಕಾಡುತ್ತಿದೆ.
ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿಯಾಗಲು ಅನೇಕರು ಕುರ್ಚಿ ಮೇಲೆ ಟವೆಲ್ ಹಾಕಿದ್ದಾರೆ.
2018ರಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಂಡವರ ಪರಿಸ್ಥಿತಿ ಏನಾಯಿತು ಎಂದು ಪ್ರಶ್ನಿಸಿದರು.
ಮೊದಲು ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದನ್ನು ತೀರ್ಮಾನಿಸಿರಿ.
ಎಲ್ಲ ಚುನಾವಣೆಯಲ್ಲೂ ಸೋತು ಮೂಲೆಗುಂಪಾಗಿರುವವರೆಲ್ಲ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಎಂದು ತಿರುಗೇಟು ನೀಡಿದರು.
ಈವರೆಗೂ ಕಾಂಗ್ರೆಸ್ ಅಲ್ಪಸಂಖ್ಯಾತರು ಮತ್ತು ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಮುಗಿಗೆ ತುಪ್ಪ ಸವರಿತು.
ಆ ಸಮುದಾಯದವರಲ್ಲಿ ಜಾಗೃತಿ ಬಂದಿದ್ದರಿಂದ ಅದೇ ಪಕ್ಷದವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್‍ಗೆ ಹೇಳಿಕೊಳ್ಳುವಂತಹ ಒಂದೇ ಒಂದು ಸಮುದಾಯವೂ ಅವರ ಬೆಂಬಲಕ್ಕಿಲ್ಲ.
ದಲಿತರ ಹೆಸರು ಹೇಳಿಕೊಂಡು ಅವರ ಮೂಗಿಗೆ ತುಪ್ಪ ಸವರಿಸಿದಿರಿ. ಕಡೆ ಪಕ್ಷ ಅಲ್ಪಸಂಖ್ಯಾತರಿಗಾದರೂ ಅವಕಾಶ ಕೊಡಿ.
ಸಿ.ಎಂ.ಇಬ್ರಾಹಿಂ, ತನ್ವೀರ್ ಸೇಠ್, ಜಮೀರ್ ಅಹಮ್ಮದ್ ಯಾರೇ ಮುಖ್ಯಮಂತ್ರಿಯಾದರೂ ನನ್ನ ಬೆಂಬಲವಿದೆ ಎಂದು ಸಿ.ಟಿ.ರವಿ ತಿಳಿಸಿದರು.