ಬೆಂಗಳೂರು: ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಕೊನೆಗೂ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ.
ಇತ್ತೀಚೆಗಷ್ಟೇ ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಈ ವೇಳೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆಂದು ಘೋಷಿಸಿದ್ದರು. ಆದರೆ, ಈಗ ಡಿಕೆ ಶಿವಕುಮಾರ್, ಯೋಗೇಶ್ವರ್ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಪಿ ಯೋಗೇಶ್ವರ್ ಅವರು ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ನಂತರ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ತೆರಳಿ ಸಿಎಂ ಸಿದ್ದರಾಯ್ಯ ಅವರನ್ನು ಭೇಟಿ ಮಾಡಿದರು. ಹೀಗಾಗಿ ಅವರು ಪಕ್ಷ ಸೇರುವುದು ಖಚಿತ ಎನ್ನಲಾಗುತ್ತಿದೆ.
ಬಿಜೆಪಿ ನಾಯಕರ ಸಲಹೆ ಮೇರೆಗೆ ಎನ್ಡಿಎ ಟಿಕೆಟ್ ಸಿಗಬಹುದು ಎಂದು ಯೋಗೇಶ್ವರ್ ನಿನ್ನೆಯವರೆಗೂ ಕಾದು ಕುಳಿತ್ತಿದ್ದರು. ಸಂಜೆ ವರೆಗೂ ಕಾಯುತ್ತೇನೆ ಎಂದು ಯೋಗೇಶ್ವರ್ ಹೇಳಿದ್ದರು. ಆದರೆ, ಬಿಜೆಪಿ ಟಿಕೆಟ್ ಘೋಷಣೆ ಆಗದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವುದು ಸಿಎಂಗೆ ಖಚಿತವಾಗಿತ್ತು. ಹೀಗಾಗಿ ಅವರು ವಯನಾಡು ಪ್ರವಾಸ ರದ್ದು ಮಾಡಿದ್ದರು. ಇನ್ನೊಂದೆಡೆ ಯೋಗೇಶ್ವರ್ ಕಾಂಗ್ರೆಸ್ ಸೇರುತ್ತಿದ್ದಂತೆ ಜೆಡಿಎಸ್ ನಲ್ಲಿ ಆತಂಕ ಶುರುವಾಗಿದೆ. ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದರಿಂದಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.








