ಬೆಂಗಳೂರು: ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸಚಿವ ಸ್ಥಾನಕ್ಕಾಗಿ ಹಾಲಿ ಶಾಸಕರು ತೀವ್ರ ಲಾಬಿ ನಡೆಸುತ್ತಿರುವಾಗಲೇ, 3-4 ಸಚಿವರು ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
6ರಿಂದ 7 ಶಾಸಕರಿಗೆ ಸಚಿವ ಭಾಗ್ಯ ಸಿಗುವ ಸಾಧ್ಯತೆ ಇದ್ದರೆ, 3-4 ಮಂದಿ ಹಾಲಿ ಸಚಿವರನ್ನು ಸಚಿವ ಸಂಪುಟದಿಂದ ಕೊಕ್ ನೀಡಿ ಆ ಸ್ಥಾನಕ್ಕೆ ಹೊಸಬರಿಗೆ ಮಂತ್ರಿ ಭಾಗ್ಯ ಕರುಣಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಸದ್ಯದ ಮೂಲಗಳ ಪ್ರಕಾರ ಅಬಕಾರಿ ಸಚಿವ ಹೆಚ್.ನಾಗೇಶ್, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಗೆ ಸಂಪುಟದಿಂದ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ ಕೆಲ ಸಚಿವರು ಮಾತ್ರ ಈ ಸಂಗತಿಯನ್ನು ಅಲ್ಲಗಳೆದಿದ್ದಾರೆ.
ಹೆಚ್.ನಾಗೇಶ್ ಬಿಎಸ್ವೈ ಭೇಟಿಯಾಗಿದ್ದೇಕೆ..!
ಸಚಿವ ಸಂಪುಟ ಪುನಾರಚನೆಯಾದರೆ ಅಬಕಾರಿ ಸಚಿವ ನಾಗೇಶ್ಗೆ ಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಇದರಿಂದ ಆತಂಕಗೊಂಡ ಹೆಚ್. ನಾಗೇಶ್ ಇಂದು ಮುಂಜಾನೆಯೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮನ್ನು ಸಂಪುಟದಿಂದ ಕೈಬಿಡದಂತೆ ಮನವಿ ಮಾಡಿದ್ದಾರೆ. ಆದರೆ, ಬಿಎಸ್ವೈ ಭೇಟಿ ಬಳಿಕ ಕೋಪದಿಂದಲೇ ಹೊರಬಂದ ಹೆಚ್. ನಾಗೇಶ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅವರನ್ನು ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.


ಪುನಾರಚನೆ ಇಲ್ಲವೇ ಇಲ್ಲ ಎಂದ ಪ್ರಭು ಚೌಹಾಣ್..
ಸಂಪುಟ ಪುನಾರಚನೆಯಾದರೆ ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ರನ್ನೂ ಕ್ಯಾಬಿನೆಟ್ನಿಂದ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ವರದಿಗಳನ್ನು ತಳ್ಳಿ ಹಾಕಿರುವ ಪ್ರಭುಚೌಹಾಣ್, ಸಿಎಂ ಬಿಎಸ್ ಯಡಿಯೂರಪ್ಪ ರಾಷ್ಟ್ರೀಯ ನಾಯಕರೊಂದಿಗೆ ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಮಾತ್ರ ಇದೆ ವಿನಃ ಪುನರ್ ರಚನೆ ಅಂತೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ನಾನು ಮೂವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ, ನಮ್ಮ ಬಿಜೆಪಿ ಪಕ್ಷ ನನಗೆ ಮನೆ ಇದ್ದಹಾಗೆ. ನಮ್ಮ ಹೈ ಕಮಾಂಡ್ ಸೂಚನೆಯಂತೆ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದಿದ್ದಾರೆ.
ಒಟ್ಟಾರೆ, ಸಚಿವ ಸಂಪುಟ ಕ್ಷಣಗಣನೆ ಆರಂಭವಾಗಿರುವಾಗಲೇ ಯಾರು ಇನ್, ಯಾರು ಔಟ್ ಎಂಬ ಕುತೂಹಲ ಹೆಚ್ಚಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








