ಇಂದು ಮತ್ತು ನಾಳೆ ಬ್ಯಾಂಕ್ ಗಳ ಮುಷ್ಕರ, ಸೇವೆಯಲ್ಲಿ ವ್ಯತ್ಯಯ……
ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಯೋಜನೆಯನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಡಿಸೆಂಬರ್ 16 ಮತ್ತು 17 ರಂದು ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಾರ್ವಜನಿಕ ಬ್ಯಾಂಕ್ ಗಳ ಸೇವೆಯಲ್ಲಿ ಇಂದು ಮತ್ತು ನಾಳೆ ವ್ಯತ್ಯವಾಗಲಿದೆ..
UFBU ಬ್ಯಾಂಕ್ ಒಕ್ಕೂಟಗಳ ಒಂದು ಬೃಹತ್ ಸಂಸ್ಥೆಯಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸಂಜಯ್ ದಾಸ್ ಮಾತನಾಡಿ, ಸಾರ್ವಜನಿಕ ಬ್ಯಾಂಕ್ ಗಳನ್ನ ಖಾಸಗೀಕರಣಗೊಳಿಸುವ ಈ ಕ್ರಮವು ಆರ್ಥಿಕತೆಯ ಆದ್ಯತೆಯ ವಲಯಗಳಿಗೆ ಹಾನಿ ಮಾಡುತ್ತದೆ ಎಂದಿದ್ದಾರೆ.
ದೇಶದ ಒಟ್ಟು ಠೇವಣಿಗಳಲ್ಲಿ ಶೇಕಡಾ 70 ರಷ್ಟು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿದೆ ಮತ್ತು ಅವುಗಳನ್ನು ಖಾಸಗಿ ಬಂಡವಾಳಕ್ಕೆ ಹಸ್ತಾಂತರಿಸುವುದರಿಂದ ಈ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಸಾಮಾನ್ಯ ಜನರ ಹಣವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಪಿಟಿಐ ವರದಿ ಮಾಡಿದೆ.
2021ರ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಹೇಳಿದ್ದರು.