ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕಾಂಗ್ರೆಸ್ ನಲ್ಲಿ ಅಣ್ಣ ತಮ್ಮಂದಿರ ಕಾಳಗ ಈಗ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಶಾಸಕ ಪ್ರದೀಪ್ ಈಶ್ವರ್ ಮತ್ತು ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ನಡುವಿನ ವಾಕ್ಸಮರ ಈಗ ಅವರ ಬೆಂಬಲಿಗರ ಮಟ್ಟಕ್ಕೆ ತಲುಪಿದ್ದು, ಪರಸ್ಪರ ಕೆಸರೆರಚಾಟ ತೀವ್ರಗೊಂಡಿದೆ. ಪ್ರದೀಪ್ ಈಶ್ವರ್ ಅವರು ರಕ್ಷಾ ರಾಮಯ್ಯ ವಿರುದ್ಧ ನೀಡಿದ್ದ ತೀಕ್ಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಕ್ಷಾ ರಾಮಯ್ಯ ಬ್ರಿಗೇಡ್, ಶಾಸಕನನ್ನು ಎರಡು ತಲೆಯ ನಾಗರಹಾವು ಎಂದು ಬಣ್ಣಿಸುವ ಮೂಲಕ ಹೊಸ ಕಿಡಿ ಹಚ್ಚಿದೆ.
ರಕ್ಷಾ ರಾಮಯ್ಯ ಬ್ರಿಗೇಡ್ ಹೆಸರಿನ ಸಾಮಾಜಿಕ ಜಾಲತಾಣದ ಪುಟದಲ್ಲಿ ಸುದೀರ್ಘ ಪೋಸ್ಟ್ ಮಾಡಲಾಗಿದ್ದು, ಪ್ರದೀಪ್ ಈಶ್ವರ್ ಅವರ ಇತಿಹಾಸವನ್ನು ಕೆದಕಲಾಗಿದೆ. ಮಿಸ್ಟರ್ ಪ್ರದೀಪ್ ಈಶ್ವರ್, ಲೋಕಸಭಾ ಚುನಾವಣೆಯ ಸಮಯದಲ್ಲಿ ರಕ್ಷಾ ರಾಮಯ್ಯ ಅವರ ಕಾಲಿಗೆ ಬಿದ್ದು ರಕ್ಷಾ ಅಣ್ಣ ಎಂದು ಕರೆಯುತ್ತಿದ್ದಿದ್ದು ಮರೆತುಹೋಯಿತೇ? ಅಂದು ಸಹಾಯ ಪಡೆದು ಇಂದು ಅವರ ವಿರುದ್ಧವೇ ಬೊಗಳುತ್ತಿರುವುದು ನಿಮ್ಮ ನಾಲಿಗೆಯ ಉದ್ದವನ್ನು ತೋರಿಸುತ್ತಿದೆ. ಕಾಂಗ್ರೆಸ್ ಪಕ್ಷದ ಶಿಸ್ತನ್ನು ಗಾಳಿಗೆ ತೂರಿ ಹಿರಿಯ ನಾಯಕರ ವಿರುದ್ಧ ಮಾತನಾಡುವಷ್ಟು ಧೈರ್ಯ ನಿಮಗೆ ಎಲ್ಲಿಂದ ಬಂತು ಎಂದು ಬ್ರಿಗೇಡ್ ಪ್ರಶ್ನಿಸಿದೆ.
ನಾಯಿ ಅಂತ ಬೈಯೋಕೂ ನಮಗೆ ಮನಸ್ಸಿಲ್ಲ
ಶಾಸಕನ ನಡವಳಿಕೆಯನ್ನು ಅತ್ಯಂತ ಕಟುವಾಗಿ ಟೀಕಿಸಿರುವ ಬೆಂಬಲಿಗರು, ನಿಮ್ಮನ್ನು ನಾಯಿ ಎಂದು ಕರೆದರೆ ಅದು ನಿಷ್ಠಾವಂತ ಪ್ರಾಣಿಯಾದ ನಾಯಿಗೇ ಅವಮಾನ ಮಾಡಿದಂತೆ. ರಾಜಕೀಯವಾಗಿ ನೆಲೆ ಕೊಟ್ಟ ಪಕ್ಷದವರ ವಿರುದ್ಧವೇ ಗುಂಪುಗಾರಿಕೆ ಮಾಡುತ್ತಿರುವ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಯುವ ಶಾಸಕನಾಗಿ ಹೊಸ ತಲೆಮಾರಿಗೆ ಮಾದರಿಯಾಗುವ ಬದಲು, ಸ್ವಪಕ್ಷದವರ ಕಾಲನ್ನೇ ಎಳೆಯುವ ನೀಚ ರಾಜಕಾರಣಕ್ಕೆ ಇಳಿದಿದ್ದೀರಿ ಎಂದು ಪೋಸ್ಟ್ನಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಸ್ವಪಕ್ಷದವರ ಮೇಲಲ್ಲ ವಿರೋಧಿಗಳ ಮೇಲೆ ಪೌರುಷ ತೋರಿಸಿ
ಪ್ರದೀಪ್ ಈಶ್ವರ್ ಅವರ ಶೌರ್ಯ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಸೀಮಿತವಾಗಿದೆ ಎಂದು ಬ್ರಿಗೇಡ್ ಲೇವಡಿ ಮಾಡಿದೆ. ನಿಮ್ಮಲ್ಲಿ ಅಷ್ಟೊಂದು ತಾಕತ್ತು ಇದ್ದರೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಂದೆ ತೋರಿಸಿ. ಅದನ್ನು ಬಿಟ್ಟು ನಿಮ್ಮದೇ ಪಕ್ಷದ ಅಭ್ಯರ್ಥಿಯಾಗಿದ್ದ ರಕ್ಷಾ ರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ಇನ್ನು ಮುಂದೆ ಇಂತಹ ವರ್ತನೆ ಮುಂದುವರಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಬ್ರಿಗೇಡ್ ಎಚ್ಚರಿಕೆ ನೀಡಿದೆ.
ಪ್ರದೀಪ್ ಈಶ್ವರ್ ನೀಡಿದ್ದ ರಿಯಲ್ ಎಸ್ಟೇಟ್ ಸಲಹೆಗೆ ತಿರುಗೇಟು
ಈ ಹಿಂದೆ ಪ್ರದೀಪ್ ಈಶ್ವರ್ ಅವರು ರಕ್ಷಾ ರಾಮಯ್ಯ ಅವರಿಗೆ ರಾಜಕೀಯ ಬಿಟ್ಟು ರಿಯಲ್ ಎಸ್ಟೇಟ್ ಮಾಡಿಕೊಂಡಿರು ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬ್ರಿಗೇಡ್, ಬೇರೆಯವರಿಗೆ ಸಲಹೆ ನೀಡುವ ಮುನ್ನ ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ. ನೀವು ಬಿಜೆಪಿ ನಾಯಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ನಮ್ಮವರನ್ನೇ ತುಳಿಯುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಗುಟ್ಟು ಬಿಟ್ಟುಕೊಟ್ಟಿದೆ. ಒಟ್ಟಾರೆಯಾಗಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ನಲ್ಲಿ ಎದ್ದಿರುವ ಈ ಕಿಚ್ಚು ಶೀಘ್ರವೇ ತಣ್ಣಗಾಗುವ ಲಕ್ಷಣಗಳಿಲ್ಲ.







