ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಸ್ಟಿಂಗ್ ಆಪರೇಷನ್ ಗಳ ಮಹಾ ಸ್ಫೋಟ ಸಂಭವಿಸಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧವೇ ರಹಸ್ಯ ಸ್ಟಿಂಗ್ ಆಪರೇಷನ್ ನಡೆಸುವ ಮೂಲಕ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಯುವಂತೆ ಮಾಡಿದ್ದರು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಒಳಗಿನ ಕರಾಳ ಸತ್ಯಗಳನ್ನು ಬಯಲಿಗೆಳೆದು ರಾಜಕೀಯ ಸಂಚಲನ ಮೂಡಿಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಹಿಂದೆ ಡಿಕೆಶಿ ಕೈವಾಡ
ಅಹಿಂದ ವರ್ಗದ ದೊಡ್ಡ ನಾಯಕ ಮತ್ತು ರಾಜ್ಯವನ್ನು ದೀರ್ಘಕಾಲ ಆಳಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅವಮಾನ ಮಾಡಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಂಪುಟ ವಿಸ್ತರಣೆಯ ಚರ್ಚೆಗೆ ಎಂದು ನಂಬಿಸಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿತ್ತು. ಆದರೆ, ಅಲ್ಲಿ ಅವರಿಗೆ ಡಿ ಕೆ ಶಿವಕುಮಾರ್ ಮತ್ತು ಒಂದು ಖಾಸಗಿ ಸುದ್ದಿವಾಹಿನಿ ಜಂಟಿಯಾಗಿ ನಡೆಸಿದ ಸ್ಟಿಂಗ್ ಆಪರೇಷನ್ ನ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ರಾಜೀನಾಮೆ ಪಡೆಯಲಾಯಿತು. ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಿದ ವ್ಯಕ್ತಿಯೇ ಈಗ ಇತರ ಸಚಿವರ ಮೇಲೂ ಕಣ್ಣಿಟ್ಟಿದ್ದಾರೆ ಎಂದು ಅವರು ದೂರಿದ್ದಾರೆ.
ಸಚಿವರ ಮೇಲೆ ಹಿಡಿತ ಸಾಧಿಸಲು ಸ್ಟಿಂಗ್ ಅಸ್ತ್ರ ಬಳಕೆ
ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎಂದು ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಕೆಲಸ ಮಾಡುತ್ತಿರುವುದೇ ಸ್ವತಃ ಮುಖ್ಯಮಂತ್ರಿಗಳು ಎಂದು ಆರೋಪಿಸಿದರು. ರಮೇಶ್ ಜಾರಕಿಹೊಳಿ ಮತ್ತು ರಾಜಣ್ಣ ಅವರಂತಹ ನಾಯಕರ ರಾಜಕೀಯ ಜೀವನವನ್ನು ಹಳ್ಳ ಹಿಡಿಸಲು ಇದೇ ತಂತ್ರ ಬಳಸಲಾಗಿತ್ತು. ಈಗ ತಮ್ಮ ಸಂಪುಟದ ಸಚಿವರು ತಮ್ಮ ಮಾತಿನಂತೆ ಕುಣಿಯಲಿ ಎಂಬ ಉದ್ದೇಶದಿಂದ ಅವರ ವಿರುದ್ಧವೇ ಸ್ಟಿಂಗ್ ಮಾಡಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸ್ಟಿಂಗ್ ಮಾಡುವುದರಲ್ಲಿ ಡಿ ಕೆ ಶಿವಕುಮಾರ್ ಒಬ್ಬ ಮಾಸ್ಟರ್ ಎಂದು ಅವರು ಲೇವಡಿ ಮಾಡಿದ್ದಾರೆ.
ಅಭಿವೃದ್ಧಿ ಚರ್ಚೆ ಬಿಟ್ಟು ಹನಿಟ್ರಾಪ್ ಮತ್ತು ಸ್ಟಿಂಗ್ ಬಗ್ಗೆ ಮಾತು
ಈ ಹಿಂದೆ ಸಚಿವ ಸಂಪುಟ ಸಭೆಗಳಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ ಹನಿಟ್ರಾಪ್, ಸ್ಟಿಂಗ್ ಆಪರೇಷನ್ ಮತ್ತು ನಾಯಕರ ಕಾಲೆಳೆಯುವ ಕೆಲಸಗಳೇ ಚರ್ಚೆಯಾಗುತ್ತಿವೆ. ಇದು ಈ ರಾಜ್ಯಕ್ಕೆ ಬಂದೊದಗಿರುವ ಅತಿದೊಡ್ಡ ದುರಂತ ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಜನಪರ ಕೆಲಸಗಳನ್ನು ಮಾಡುವ ಬದಲು ಬೆಳಿಗ್ಗೆಯಿಂದ ಸಂಜೆಯವರೆಗೆ ಯಾರನ್ನು ಹೇಗೆ ಸಿಲುಕಿಸಬೇಕು ಎಂಬ ಸಂಚು ರೂಪಿಸುವುದರಲ್ಲೇ ಮಗ್ನರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ದೇವೇಗೌಡರ ಕುಟುಂಬ ಮುಗಿಸಲು ಕುತಂತ್ರ
ಕೇವಲ ತಮ್ಮ ಪಕ್ಷದ ಸಚಿವರಷ್ಟೇ ಅಲ್ಲ, ಹೆಚ್ ಡಿ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಮುಖ್ಯಮಂತ್ರಿಗಳು ನಿರಂತರವಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ. ತಡಿಯಪ್ಪಾ ಒಬ್ಬರನ್ನು ಕರೆಸಿ ಮಾಡುವಷ್ಟೊತ್ತಿಗೆ ಸಾಕಾಗಿದೆ ಎಂದು ಈ ಹಿಂದೆ ಅವರು ಹೇಳಿದ್ದೇ ಅವರ ಕುತಂತ್ರಕ್ಕೆ ಸಾಕ್ಷಿ. ವಿರೋಧ ಪಕ್ಷಗಳ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಸಿಎಂ, ತಮ್ಮದೇ ಶಾಸಕರು ನೀಡುತ್ತಿರುವ ಮಾಹಿತಿಯನ್ನು ಗಮನಿಸಲಿ. ರಾಜಣ್ಣ ಅವರು ವಿಧಾನಸಭೆಯಲ್ಲಿ 40 ಜನರ ಸ್ಟಿಂಗ್ ನಡೆದಿದೆ ಎಂದು ಹೇಳಿದ್ದನ್ನು ಜನ ಮರೆತಿಲ್ಲ ಎಂದು ಅವರು ನೆನಪಿಸಿದ್ದಾರೆ.
ಎಸ್ ಐಟಿ ತನಿಖೆ ಮಾಡಿಸಲು ತಾಕತ್ತಿದೆಯೇ
ನಾವೇನಾದರೂ ಇಂತಹ ಕೆಲಸ ಮಾಡಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳಲಿ ಎಂದು ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ನಿಮ್ಮ ಬಳಿಯೇ ಎಸ್ ಐಟಿ ತನಿಖಾ ಸಂಸ್ಥೆ ಇದೆ, ಅದಕ್ಕೆ 35 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದೀರಿ. ತಾಕತ್ತಿದ್ದರೆ ಈ ಸ್ಟಿಂಗ್ ಆಪರೇಷನ್ ಗಳ ಮೂಲ ಪತ್ತೆ ಹಚ್ಚಲು ಆದೇಶ ನೀಡಿ ಎಂದು ಅವರು ಗುಡುಗಿದ್ದಾರೆ. ಕಾಂಗ್ರೆಸ್ ನ ಮಿತ್ರರೇ ನೀಡುತ್ತಿರುವ ಮಾಹಿತಿಯ ಪ್ರಕಾರ, ಡಿ ಕೆ ಶಿವಕುಮಾರ್ ಅವರು ಸ್ಟಿಂಗ್ ಆಪರೇಷನ್ ಎಂಬ ಅಸ್ತ್ರದ ಮೂಲಕವೇ ಮುಖ್ಯಮಂತ್ರಿ ಕುರ್ಚಿಯನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಅವರು ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.








