ನವದೆಹಲಿ: ನಾಳೆ ರಾತ್ರಿ 9 ಗಂಟೆಗೆ ಎಲ್ಲರೂ ಮನೆಯ ಲೈಟ್ ಆಫ್ ಮಾಡಿ ದೀಪ ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಕ್ಯಾಂಡಲ್ ಬೆಳಗಿಸುವುದರಿಂದ ಕೊರೊನಾ ಸಮಸ್ಯೆ ಬಗೆಹರಿಯವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ, ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊವಿಡ್-19 ಪರೀಕ್ಷೆಗಳು ನಡೆಯುತ್ತಿಲ್ಲ. ಜನ ಚಪ್ಪಾಳೆ ತಟ್ಟುವುದರಿಂದ ಮತ್ತು ಆಕಾಶಕ್ಕೆ ಟಾರ್ಚ್ ಬೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಚಾರ್ಟ್ ಒಂದನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಭಾರತ ಹಾಗೂ ಇತರೆ ದೇಶಗಳು ಪ್ರತಿ ಮಿಲಿಯನ್ ಜನರಲ್ಲಿ ಎಷ್ಟು ಜನರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದರಲ್ಲಿ ಭಾರತ ಪ್ರತಿ ಮಿಲಿಯನ್ ಜನತೆಗೆ 29 ಮಂದಿಯನ್ನು ಮಾತ್ರ ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಪಾಕಿಸ್ತಾನ ಪ್ರತಿ ಮಿಲಿಯನ್ ಗೆ 67, ಶ್ರೀಲಂಕಾ 97, ಇಂಗ್ಲೆಂಡ್ 1891, ಅಮೆರಿಕ 2732, ಜರ್ಮನಿ 5812 ಮತ್ತು ಇಟಲಿ 7122 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದೆ.
ಇನ್ನು ಭಾನುವಾರ ರಾತ್ರಿ 9 ಗಂಟೆಗೆ, 9 ನಿಮಿಷಗಳ ಕಾಲ ಎಲ್ಲರಗೂ ಮನೆಯ ಲೈಟ್ ಆಫ್ ಮಾಡಿ, ದೀಪ, ಕ್ಯಾಂಡಲ್ ಅಥವಾ ಮೊಬೈಲ್ ಟಾರ್ಚ್ ಬೆಳಗಿಸುವಂತೆ ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳ ಯುದ್ಧವೇ ನಡೆಯುತ್ತಿದೆ.








