ಜಾತಿಗಳ ನಡುವೆ ಜಗಳದ ಬೀಜ ಬಿತ್ತುವ ಉದ್ದೇಶದಿಂದಲೇ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಮಾಡಿಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಟೀಕೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಮಾಡುತ್ತಿರುವ ಜಾತಿ ಒಳಮೀಸಲು ಸಮೀಕ್ಷೆ ಬಗ್ಗೆ ಆರ್. ಅಶೋಕ್ ವಾಗ್ದಾಳಿ ನಡೆಸಿ, ಕೇವಲ ಜನರ ಮನಸ್ಸಿನಲ್ಲಿ ವಿಭಜನೆ ತರೋ ನಿಟ್ಟಿನಲ್ಲಿ ಈ ಸಮೀಕ್ಷೆ ನಡೆಯುತ್ತಿದೆ. ಈಗ ಜಾತಿ ಗಣತಿ 15 ದಿನಗಳಲ್ಲಿ ಮುಗಿದರೆ, ಹಿಂದಿನ ಸರ್ಕಾರ ಕಾಲದಲ್ಲಿ ಮಾಡಿದ ಸಮೀಕ್ಷೆ ಬಿಡುಗಡೆಗೆ 10 ವರ್ಷವಾಗಿದೆ . ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲೆಡೆ ಗೌರವ ಮತ್ತು ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರದ ಈ ಸಮೀಕ್ಷೆಗೆ ಬೆಲೆ ಇಲ್ಲ, ಎಂದು ಕಿಡಿಕಾರಿದ್ದಾರೆ.
ಇನ್ನು ಈ ಸಮೀಕ್ಷೆ ಸರಿಯಾದ ಪ್ರಕ್ರಿಯೆಯಿಲ್ಲದೇ, ರಾಜಕೀಯ ಲಾಭಕ್ಕೋಸ್ಕರ ನಡೆಯುತ್ತಿದೆ ಎಂದು ಆರೋಪಿಸಿದ ಅಶೋಕ್, ಇದು ಕೇವಲ ಒಂದು ಜಾತಿಯ ರಾಜಕಾರಣ. ರಾಜ್ಯದ ಜನತೆ ಇದಕ್ಕೆ ಭವಿಷ್ಯದಲ್ಲಿ ತಕ್ಕ ಉತ್ತರ ಕೊಡುತ್ತಾರೆ, ಎಂದು ಎಚ್ಚರಿಸಿದ್ದಾರೆ.








