ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಂಗ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಧಾರವಾಡಕ್ಕೆ ಕರೆತರಲಾಗಿದ್ದು, ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಗುರುವಾರ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾಗ ಧಾರವಾಡದ ಉಪನಗರ ಠಾಣೆ ಎದುರು ಇಡೀ ದಿನ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹೈಡ್ರಾಮ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಹಸ್ಯ ಸ್ಥಳಕ್ಕೆ ವಿನಯ್ ಕುಲಕರ್ಣಿ ಅವರನ್ನು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ನಾಳೆಗೆ ಕಷ್ಟಡಿ ಅಂತ್ಯಗೊಳ್ಳುವುದರಿಂದ ಎರಡು ದಿನ ಸಿಬಿಐ ಅಧಿಕಾರಿಗಳಿಂದ ವಿನಯ್ ಕುಲಕರ್ಣಿ ತೀವ್ರ ವಿಚಾರಣೆ ನಡೆಯಲಿದೆ.
ನಿನ್ನೆಯೇ ಧಾರವಾಡ ಜಿಲ್ಲಾ ನ್ಯಾಯಾಲಯ ವಿನಯ್ ಕುಲಕರ್ಣಿ ಅವರನ್ನು 3 ದಿನ ಸಿಬಿಐ ಕಸ್ಟಡಿಗೆ ನೀಡಿತ್ತು. ಆದರೆ, ಕೋರ್ಟ್ ಆದೇಶದ ಪ್ರತಿ ಸಕಾಲಕ್ಕೆ ತಲುಪದ ಕಾರಣ ನಿನ್ನೆ ಸಿಬಿಐ ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಇಂದು ಬೆಳಿಗ್ಗೆ ನ್ಯಾಯಲಯದ ಆದೇಶದ ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ಹಾಜರುಪಡಿಸಿದ ಸಿಬಿಐ ಅಧಿಕಾರಿಗಳು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದರು.
ಹ್ಯಾಪಿ ಬರ್ತ್‍ಡೇ ಶುಭಾಷಯ ಹೇಳಿದ ಸಿಬಿಐ
ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಅವರಿಗೆ ಸಿಬಿಐ ಅಧಿಕಾರಿಗಳು ಹುಟ್ಟುಹಬ್ಬದ ಶುಭಾಷಯ ಹೇಳಿ ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಆದೇಶದ ಪ್ರತಿ ಸಲ್ಲಿಸಿ ಕಾನೂನು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಇಂದು ನಿಮ್ಮ ಹುಟ್ಟುಹಬ್ಬ. ಹಾಗಾಗಿ ನಿಮಗೆ ಹುಟ್ಟುಹಬ್ಬದ ಶುಭಾಷಯ ಕೋರುವುದಾಗಿ ತಿಳಿಸಿದ್ದಾರೆ.
ಸಿಬಿಐನಿಂದ ಬಂಧನವಾಗದಿದ್ದರೆ ವಿನಯ್ ಕುಲಕರ್ಣಿ ಇಂದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಬರ್ತ್‍ಡೇ ಆಚರಣೆ ಎರಡು ದಿನ ಬಾಕಿ ಇರುವಾಗಲೇ ಸಿಬಿಐ ವಿನಯ್ ಕುಲಕರ್ಣಿಗೆ ಗಾಳ ಹಾಕಿದೆ.
ವಿನಯ್ ಕುಲಕರ್ಣಿ ಅಭಿಮಾನಿಗಳೂ ನೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಧಾರವಾಡ ನಗರದ ಹಲವೆಡೆ ಫ್ಲೆಕ್ಸ್ ಹಾಕಿದ್ದ ಅಭಿಮಾನಿಗಳು, ತಮ್ಮ ನಾಯಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬರುತ್ತಾರೆ. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸೋಣ ಎಂದು ಪ್ಲಾನ್ ಮಾಡಿದ್ದರು. ಈ ಆಸೆಗೆ ಕೋರ್ಟ್ ತಣ್ಣೀರು ಎರಚಿದೆ.
ಕಣ್ಣೀರಿಟ್ಟ ವಿನಯ್ ಕುಲಕರ್ಣಿ..?
ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಾಗದೇ ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಲ್ಲಿ ಕಣ್ಣೀರಿಟ್ಟರು ಎನ್ನಲಾಗಿದೆ. ಹುಟ್ಟುಹಬ್ಬದ ದಿನವಾದ ಇಂದು ತಾವು ಕುಟುಂಬದವರೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವಕಾಶ ನೀಡಲಿಲ್ಲ. ಹೀಗಾಗಿ ನೊಂದು ವಿನಯ್ ಕುಲಕರ್ಣಿ ಕಣ್ಣೀರಿಟ್ಟರು ಎಂದು ಮೂಲಗಳು ತಿಳಿಸಿವೆ.
ವಿನಯ್ ಕುಲಕರ್ಣಿ ಅವರಿಗೆ ಹುಟ್ಟುಹಬ್ಬಕ್ಕೆ ವಿಷ್ ಮಾಡಲು ಅಭಿಮಾನಿಗಳು ಜೈಲಿನ ಬಳಿ ಬರುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನ ಆವರಣಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು. ಬೆಳ್ಳಂಬೆಳಿಗ್ಗೆ ಸಿಬಿಐ ಅಧಿಕಾರಿಗಳು ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ಕರೆದೊಯ್ದ ಹಿನ್ನೆಲೆಯಲ್ಲಿ ಅಭಿಮಾನಿಗಳಾಗಲಿ, ಕಾಂಗ್ರೆಸ್ ಕಾರ್ಯಕರ್ತರಾಗಲಿ ಜೈಲಿನತ್ತ ಸುಳಿಯಲಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel