ಕೊರೊನಾ ಕುರಿತು ಕೇಂದ್ರ ಸರಕಾರ ಸೂಚನೆ ನೀಡಿದೆ : ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಕೊರೊನಾ ಕುರಿತು ಕೇಂದ್ರ ಸರಕಾರ ಈಗಾಗಲೇ ಜಾಗೃತಿ ಸೂಚನೆ ನೀಡಿದ್ದು, ಈ ಸಂಬಂಧ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 8-10 ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ಆದ್ದರಿಂದ ಕೊರೊನಾ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಜಾಗೃತಿ ಸೂಚನೆ ಕೊಟ್ಟಿದೆ ಎಂದರು.
ಅಲ್ಲದೇ ಕೋವಿಡ್ ತಜ್ಞರಿಂದಲೂ ಸೂಚನೆ ಸಿಕ್ಕಿದೆ. ಕೋವಿಡ್ 2ನೇ ಅಲೆ ಬಂದಾಗ ತುಂಬಾ ಗಂಭೀರವಾಗಿತ್ತು. ಆದರೀಗ ಒಮಿಕ್ರಾನ್ ಯಾವ ರೀತಿಯಲ್ಲಿದೆ ಅನ್ನೋದನ್ನು ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ.
ಇನ್ನೂ ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ ಇ-ಮೇಲ್ ವಿಚಾರಕ್ಕೆ ಮಾತನಾಡಿ, ಇ-ಮೇಲ್ ಅನ್ನು ದುಬೈ, ಸೌದಿ ಅರೇಬಿಯಾದಿಂದಲೂ ಮೇಲ್ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಕೇಂದ್ರ ಸರ್ಕಾರದ ಸಹಕಾರದಿಂದ ಪತ್ತೆಹಚ್ಚುವ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.