ಔಷಧಗಳ ಕಾಳಸಂತೆ ಮಾರಾಟಕ್ಕೆ ಕಡಿವಾಣ – ಸುಪ್ರಿಂಕೋರ್ಟ್ ಗೆ ಕೇಂದ್ರ ಪ್ರಮಾಣಪತ್ರ
ನವದೆಹಲಿ: ಒಂದೆಡೆ ದೇಶದಲ್ಲಿ ಕೋವಿಡ್ 2 ನೇ ಅಲೆ ಭಯಾನಕ ಸ್ವರೂಪ ಪಡೆದುಕೊಂಡು ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ… ಈ ನಡುವೆ ಇಂತಹ ಪರಿಸ್ಥಿತಿಯಲ್ಲಿ ಕೆಲ ನೀಚರು ಕಾಳ ದಂಧೆಯಿಂದ ಹಣ ಸಂಪಾದನೆ ಇಳಿದಿದದ್ದಾರೆ. ಅಗತ್ಯ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.. ಇದಕ್ಕೆ ಕಡಿವಾಣ ಹಾಕಲು ಎಲ್ಲ ರಾಜ್ಯಗಳು ವಿವಿಧ ಹಂತಗಳಲ್ಲಿ ವಿಶೇಷ ತಂಡಗಳನ್ನು ರಚಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಕುರಿತಂತೆ ಭಾರತದ ಪ್ರಧಾನ ಔಷಧ ನಿಯಂತ್ರಕರು (ಡಿಸಿಜಿಐ) ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ‘ಮನುಷ್ಯನ ನೋವುಗಳ ವ್ಯಾಪಾರೀಕರಣ, ಶೋಷಣೆಯನ್ನು ಸಹಿಸುವುದಿಲ್ಲ’ ಎಂಬ ಸಂದೇಶವನ್ನು ವಿಶೇಷ ತಂಡಗಳ ರಚನೆಯ ಮೂಲಕ ನೀಡಬೇಕಾಗಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ. ಕಾಳಸಂತೆಯಲ್ಲಿ ಔಷಧಗಳ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಔಷಧ ನಿಯಂತ್ರಣ ಕಾಯ್ದೆ, ಅಗತ್ಯ ವಸ್ತುಗಳ ಸೇವಾ ಕಾಯ್ದೆ ಹಾಗೂ ಸಂಬಂಧಿತ ಇತರೆ ಕಾಯ್ದೆಗಳ ಅನುಸಾರ ಔಷದಗಳ ಕಾಳಸಂತೆ ಮಾರಾಟಕ್ಕೆ ಕಡಿವಾಣ ಹೇರಬೇಕು. ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಬಳಸಬೇಕು ಎಂದೂ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.
ಅಲ್ಲದೇ ಸುಪ್ರೀ ಕೋರ್ಟ್ ಗೆ ಸಲ್ಲಿಸಲಾಗಿರುವ ಪ್ರಮಾಣ ಪತ್ರದಲ್ಲಿ ದೇಶದಾದ್ಯಂತ ಈವರೆಗೆ 157 ಪ್ರಕರಣ ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ.. ಅಲ್ಲದೇ ಎಫ್‌ಐಆರ್ ದಾಖಲಿಸಲಾಗಿದೆ. ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರವು ಕೋರ್ಟ್‌ಗೆ ಮಾಹಿತಿ ನೀಡಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ರೆಮಿಡಿಸಿವಿರ್ ಮತ್ತು ಟಾಸಿಲ್‌ಜುಮಬ್ ಅಂತಹ ಔಷಧಗಳನ್ನು ಅಡ್ಡದಾರಿಯ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಪೀಠವು, ಜನರ ಅಸಹಾಯಕತೆಗಳಿಂದ ಲಾಭ ಪಡೆಯುವ ಮತ್ತು ನೋವುಗಳನ್ನು ಶೋಷಿಸುವ ಮನೋಭಾವ ಖಂಡನೀಯ ಎಂದು ಅಭಿಪ್ರಾಯಪಟ್ಟಿತು. ಔಷಧಗಳ ಮಾರಾಟ ಮತ್ತು ವಿತರಣೆಯನ್ನು ಔಷಧ ನಿಯಂತ್ರಣ ಕಾಯ್ದೆ 1940 ಮತ್ತು 1945ರ ಔಷಧ ನಿಯಮಗಳು ಅನ್ವಯ ನಿಯಂತ್ರಿಸಲಾಗುತ್ತಿದೆ ಎಂದು ತಿಳಿಸಿದೆ.








