ಬೂಸ್ಟರ್ ಬಗ್ಗೆ ಕೇಂದ್ರ ಮಟ್ಟದಲ್ಲಿ ಚರ್ಚೆ : ಸುಧಾಕರ್
ಬೆಂಗಳೂರು : ಡಿಸೆಂಬರ್ 2 ಅಥವಾ 3 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೂಸ್ಟರ್ ಡೋಸ್ ಬಗ್ಗೆ ವೈಜ್ಞಾನಿಕವಾದ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಟೆಲಿ ಮಡಿಸಿನ್, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಮತ್ತು ಮಾರ್ಗಸೂಚಿಗಳನ್ನು ಕಠಿಣವಾಗಿ ಜಾರಿಗೆ ತರಲಾಗುವುದು.
ಸಾರ್ವಜನಿಕರು ಸರ್ಕಾರದ ಜೊತೆ ಕೈ ಜೋಡಿಸಿದರೆ ಬೇಗನೆ ಆತಂಕದಿಂದ ಹೊರಬರಬಹುದು. ಒಮಿಕ್ರಾನ್ ಮಣಿಸಲು ಜಾಗೃತಿ ಮತ್ತು ಜಾಗ್ರತೆ ಎರಡೂ ಬೇಕು ಎಂದು ತಿಳಿಸಿದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಎರಡು ಡೋಸ್ ಲಸಿಕೆ ಪಡೆಯದವರಿಗೆ ಸರ್ಕಾರದಿಂದ ಕೊಡುವ ಸೌಲಭ್ಯಗಳನ್ನು ಕಡಿತ ಮಾಡಬೇಕು ಮತ್ತು ದಂಡ ಹಾಕಬೇಕು ಎಂದು ಸಲಹೆ ನೀಡಿತ್ತು.
ಆದರೆ ಸರ್ಕಾರ ಅದನ್ನು ಮಾಡುವುದಿಲ್ಲ. ಬದಲಾಗಿ ಲಸಿಕೆ ಪಡೆಯದಿರುವವರ ಮನ ಒಲಿಸಿ ಅವರನ್ನು ಲಸಿಕೆ ಪಡೆಯುವಂತೆ ಮಾಡಲಾಗುವುದು.
ಕಳೆದ ಎರಡು ದಿನಗಳಿಂದ ಲಸಿಕೆ ತೆಗೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ಫಲಪ್ರದವಾಗಿದೆ ಎಂದು ತಿಳಿಸಿದರು.
ಒಮಿಕ್ರಾನ್ ಮಕ್ಕಳ ಮೇಲೆ ಪ್ರಭಾವ ಬೀರುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಇದು ಬಹಳ ವೇಗವಾಗಿ ಹರಡುವ ವೈರಸ್ ಎಂದು ತಿಳಿದುಬಂದಿದೆ.
ಮಕ್ಕಳ ಲಸಿಕೆ ಬಗ್ಗೆ ಕೂಡ ಕೇಂದ್ರ ಸರ್ಕಾರ ಚರ್ಚೆ ಮಾಡುತ್ತಿದೆ. ಆದಷ್ಟು ಶೀಘ್ರದಲ್ಲಿ ಮಕ್ಕಳ ಲಸಿಕೆ ಎಲ್ಲಾ ರಾಜ್ಯಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.









