ಬೆಂಗಳೂರು : ಸಿಇಟಿ ಪರೀಕ್ಷೆ (CET Exam) ಬರೆದು ಎ ಅರ್ಹತಾ ಕಂಡಿಕೆಯಡಿ ಕ್ಲೇಮ್ ಮಾಡಿದ್ದ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣಪತ್ರ ಮತ್ತು ಇತರ ದಾಖಲಾತಿಗಳ ಆನ್‌ಲೈನ್ ಪರಿಶೀಲನೆ ಜೂನ್ 27ರಿಂದ ಜುಲೈ 15ರವರೆಗೆ ನಡೆಯಲಿದೆ. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority)ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಹೇಳಿದ್ದಾರೆ.
ರ‍್ಯಾಂಕಿಂಗ್ ಪಡೆದಿರುವ ಅಭ್ಯರ್ಥಿಗಳು ಯಾವ ದಿನಾಂಕದಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ದಾಖಲಾತಿಗಳನ್ನು ಹಾಜರುಪಡಿಸಬೇಕು. ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಮುಂತಾದವುಗಳ ಪರಿಶೀಲನೆ ನಿಯಮಗಳ ಪ್ರಕಾರ ನಡೆಯಲಿದೆ. ಜಾತಿ/ಆದಾಯ ಪ್ರಮಾಣಪತ್ರಗಳನ್ನು ಅಭ್ಯರ್ಥಿಗಳ ಹೆಸರಿನಲ್ಲಿಯೇ ಪಡೆದಿರಬೇಕು. ಅಲ್ಲದೇ, ಸಿಇಟಿ ಪ್ರವೇಶ ಪತ್ರ, ಅಂತಿಮವಾಗಿ ಅರ್ಜಿ ಪ್ರಿಂಟ್ ಮಾಡಿದ ಪ್ರತಿ, ಬಿಇಒ/ಡಿಡಿಪಿಯು ಅವರ ಮೇಲುರುಜು ಮಾಡಿರುವ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು ಎಂದು ಹೇಳಿದ್ದಾರೆ.








