ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Reservoir) ಗೇಟ್ ನ ಚೈನ್ ಲಿಂಕ್ ತುಂಡಾಗಿರುವ ಹಿನ್ನೆಲೆಯಲ್ಲಿ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಹೀಗಾಗಿ ಆತಂಕ ಮನೆ ಮಾಡುತ್ತಿದೆ.
ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಶಿವರಾಜ್ ತಂಗಡಗಿ (Shivraj Tangadagi) ಜಲಾಶಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ 60 ರಿಂದ 65 ಟಿಎಂಸಿಗೂ ಹೆಚ್ಚು ನೀರು ಖಾಲಿ ಮಾಡಲಾಗಿದೆ. 20 ಅಡಿ ನೀರು ಖಾಲಿಯಾದರೆ ಮಾತ್ರ ಸಮಸ್ಯೆಯ ಕುರಿತು ತಿಳಿಯಲಿದೆ. ಹೀಗಾಗಿ ನೀರನ್ನು ಮಾಡುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ಡ್ಯಾಂ ನಿರ್ಮಾಣ ಸಮಯದಲ್ಲಿನ ಡಿಸೈನ್ ತರಿಸಲಾಗುತ್ತಿದೆ. ನೀರಿನ ರಭಸ ಹೆಚ್ಚಾಗಿರುವುದರಿಂದ ಕೆಳಗಿಳಿದು ಕೆಲಸ ಮಾಡಲು ಆಗಲ್ಲ. ಸದ್ಯ 1 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತದೆ. 2.35 ಲಕ್ಷ ಕ್ಯುಸೆಕ್ ನೀರು ಬಿಟ್ಟರೂ ಯಾರಿಗೂ ತೊಂದರೆಯಾಗುವುದಿಲ್ಲ. 2.50 ಲಕ್ಷ ಕ್ಯುಸೆಕ್ಸ್ ನೀರು ಹರಿದರೆ ಮಾತ್ರ ತೊಂದರೆಯಾಗಲಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ಭಾನುವಾರ ಬೆಂಗಳೂರು, ಹೈದರಾಬಾದ್, ಚೆನ್ನೈನಿಂದ ತಜ್ಞರ ತಂಡ ಆಗಮಿಸಲಿದೆ. ಆನಂತರ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.