ರಸ್ತೆಗಿಳಿದ ವಾಹನಗಳ ಜಪ್ತಿ ಮಾಡಿದ ಚಾಮರಾಜನಗರ ಪೊಲೀಸರು chamarajanagar
ಚಾಮರಾಜನಗರ : ಕೋರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯಾದ್ಯಂತ ಟಫ್ ರೂಲ್ಸ್ ನ ಲಾಕ್ ಡೌನ್ ಗೆ ಆದೇಶ ಮಾಡಿದ ಹಿನ್ನಲೆಯಲ್ಲಿ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ರಸ್ತೆಯಲ್ಲಿ ಸಂಚಾರ ಮಾಡುವ ದ್ವಿಚಕ್ರ ವಾಹನಗಳನ್ನು ಸಂಚಾರಿ ಪೊಲೀಸರು ಸೀಜ್ ಮಾಡಿದರು.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆ 9 ಗಂಟೆಯ ಬಳಿಕ ಫೀಲ್ಡ್ ಗಿಳಿದ ಸಂಚಾರಿ ಪೊಲೀಸರು ನಾಕಾಬಂಧಿಗಳನ್ನು ಹಾಕಿ, ವಾಹನದಲ್ಲಿ ಸಂಚಾರ ಮಾಡುವವರನ್ನು ತಡೆದು ಪ್ರಶ್ನಿಸುತ್ತಿದ್ದರು.
ಅನಾಗತ್ಯವಾಗಿ ಸಂಚಾರ ಮಾಡುತ್ತಿರುವುದು ಕಂಡು ಬಂದವರ ವಾಹನಗಳನ್ನು ಜಪ್ತಿ ಪಡಿಸಿಕೊಳ್ಳಲಾಗುತ್ತಿತ್ತು.
ನಗರದ ಹೃದಯ ಭಾಗ ಶ್ರೀ ಭುವನೇಶ್ವರಿ ವೃತ್ತದಲ್ಲಿ ಅನಾಗತ್ಯವಾಗಿ ಸಂಚಾರ ಮಾಡುವ ದ್ವಿಚಕ್ರ ವಾಹನ ಸವಾರರಿಗೆ ಕೈ ಮುಗಿದು ಸಂಚಾರ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡುತ್ತಿದ್ದದ್ದು ಕಂಡು ಬಂತು.
ಕೆಲವೆಡೆ ಪೊಲೀಸರು ವಾಹನಗಳನ್ನು ಜಪ್ತಿ ಪಡಿಸಿಕೊಂಡು, ಸವಾರರಿಗೆ ನೀತಿ ಪಾಠ ಹೇಳಿದರೆ, ಮತ್ತೆ ಕೆಲವಡೆ ಬೈಕ್ ಸವಾರರನ್ನು ಇಳಿಸಿ ಬಸ್ಕಿ ಹೊಡೆಸಿದ ಘಟನೆಯೂ ನಡೆಯಿತು.
ಚಾಮರಾಜನಗರ ಜಿಲ್ಲೆಯಾದ್ಯಂತೆ ಇಂತಹ ಪ್ರಸಂಗಗಳು ನಡೆಯುತ್ತಿದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರಾ ಥಾಮಸ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು.










