ರಾಮನಗರ: ಚನ್ನಪಟ್ಟಣ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಬಿಡಲ್ಲ ಎಂಬ ದಾಟಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬಿಟ್ಟು ಕೊಡುವ ಕುರಿತು ಯಾವುದೇ ಚರ್ಚೆ ಅಥವಾ ಷರತ್ತು ಆಗಿಲ್ಲ ಎಂದಿದ್ದಾರೆ. ಯೋಗೇಶ್ವರ್ ಅವರಿಗೆ ಅಥವಾ ಇನ್ಯಾರಿಗೆ ಆಗಲಿ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂದು ಬಿಜೆಪಿ (BJP) ವರಿಷ್ಠರ ಜೊತೆ ಒಪ್ಪಂದವಾಗಿರಲಿಲ್ಲ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ. ಸತತ ಎರಡು ಬಾರಿ ನಾವಿಲ್ಲಿ ಗೆಲುವು ಸಾಧಿಸಿದ್ದೇವೆ. ನಮ್ಮ ತಪ್ಪಿನಿಂದಾಗಿ ಒಂದು ಬಾರಿ ಕೇವಲ 3 ಸಾವಿರ ವೋಟ್ ಗಳಿಂದ ಸೋಲು ಕಂಡಿದ್ದೇವೆ. ಆದರೆ, ಈ ಬಾರಿ ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಕ್ಷಣದ ತನಕ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರಾಗಬೇಕು ಎಂದು ನಾನು ನಿರ್ಧಾರ ಮಾಡಿಲ್ಲ. ಕಾರ್ಯಕರ್ತರ ಸಭೆಗಳನ್ನು ಮಾಡಲಾಗುತ್ತಿದೆ. ಅಂತಿಮವಾಗಿ ರಾಜ್ಯ ಮತ್ತು ದೆಹಲಿ ಮಟ್ಟದ ನಾಯಕರ ಜತೆ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು. ಬಿಜೆಪಿ ನಾಯಕರು, ಕಾರ್ಯಕರ್ತರು ಸಭೆ ಮಾಡಿರುವುದರಲ್ಲಿ ತಪ್ಪೇನಿಲ್ಲ. ಅದನ್ನು ತಪ್ಪು ಎಂದು ನಾನು ಹೇಳಲಾರೆ ಎಂದಿದ್ದಾರೆ.
ನಿಖಿಲ್ ಸ್ಪರ್ಧಿಸುವ ಕುರಿತು ಇದುವರೆಗೂ ತೀರ್ಮಾನವಾಗಿಲ್ಲ. ನನ್ನ ಉದ್ದೇಶ ಇಲ್ಲಿ ಕಾಂಗ್ರೆಸ್ ಸೋಲಬೇಕು. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆಲ್ಲಬೇಕು. ಬಿಜೆಪಿ ಹಾಗೂ ಜೆಡಿಎಸ್ ಒಂದಾದರೆ, ಇಲ್ಲಿ ಕಾಂಗ್ರೆಸ್ ಗೆಲ್ಲುವ ಮಾತೇ ಇಲ್ಲ ಎಂದಿದ್ದಾರೆ.