ಆನೇಕಲ್: ವಧುದಕ್ಷಿಣೆ ಪಡೆದು ವಧು ನೀಡದೆ ವರನಿಗೆ ವಂಚಿಸಿರುವ ಆರೋಪವೊಂದು ಆನೇಕಲ್ (Anekal) ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ವರನ ಕುಟುಂಬಸ್ಥರು ಯುವತಿ ಹಾಗೂ ಕುಟುಂಬಸ್ಥರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2021ರಲ್ಲಿ ಜಿಗಣಿಯ ನಾರಾಯಣ ನಾಯಕ್ ಎಂಬುವವರ ಜೊತೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವತಿಯ ಮದುವೆ ಮಾತುಕತೆ ನಡೆದಿತ್ತು. ಆಗ ಯುವತಿಯ ಕಡೆಯವರು ನಮ್ಮ ಬಳಿ ಹಣ ಇಲ್ಲ, 2 ವರ್ಷಗಳ ನಂತರ ಮದುವೆ ಮಾಡುತ್ತೇವೆ ಎದು ಹೇಳಿ, 2 ಲಕ್ಷ ರೂ. ಕೂಡ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ, ಎರಡು ವರ್ಷದ ನಂತರ ಮದುವೆ ಬೇಡ ಎಂಬ ನಿಲುವಿಗೆ ಯುವತಿ ಮತ್ತು ಆಕೆಯ ಕುಟುಂಬಸ್ಥರು ಬಂದಿದ್ದರು. ಸದ್ಯ ನಾವು ಕೊಟ್ಟ ವಧುದಕ್ಷಿಣೆ ವಾಪಸ್ ನೀಡುವಂತೆ ಜಿಗಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಧುವಿನ ಸಂಬಂಧಿಕರಾದ ಲಕ್ಕಪತಿ ರವಿ ವಿರುದ್ಧ ದೂರು ದಾಖಲಾಗಿದೆ.
ನಾರಾಯಣ ನಾಯಕ್ ಸುಳ್ಳು ಹೇಳಿ ಮದುವೆ ಆಗಲು ಮುಂದಾಗಿದ್ದರು. ಊರಲ್ಲಿ ಬಹಳಷ್ಟು ಆಸ್ತಿಪಾಸ್ತಿ ಇದೆ ಅಂತ ಹೇಳಿದ್ದರು. ಆದರೆ ನಾವು ಊರಿಗೆ ಭೇಟಿ ನೀಡಿದಾಗ ಅಂಥಾದ್ದೇನು ಇರಲಿಲ್ಲ. ತಂದೆ ತಾಯಿ ಮಗಳ ಭವಿಷ್ಯ ನೋಡಿ ಬೇಡ ಅಂದಿದ್ದಾರೆ ಅಂತ ವಧುವಿನ ಅಕ್ಕ ಹಾಗೂ ಸಂಬಂಧಿಕರು ಹೇಳಿದ್ದಾರೆ.