ನಿನಗೆ ಏನೊ ಹೇಳಿದ್ದೇನೋ ಅದೇ ಮಾಡು..ಕೊಹ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದ ಧೋನಿ..!
ಧೋನಿ ನನ್ನ ನಾಯಕ ಅಂತ ವಿರಾಟ್ ಕೊಹ್ಲಿ ಆಗಾಗ ಹೇಳಿಕೊಳ್ಳುತ್ತಾರೆ. ಕೆಲವರು ಧೋನಿ ಮತ್ತು ವಿರಾಟ್ ನಡುವಿನ ಸಂಬಂಧ ಚೆನ್ನಾಗಿಲ್ಲ ಅಂತ ಹೇಳುತ್ತಾರೆ. ಅದ್ರಲ್ಲೂ ಧೋನಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನ ನಾಯಕತ್ವ ತ್ಯಜಿಸಿದ್ದಾಗ ವಿರಾಟ್ ಜೊತೆಗಿನ ಸಂಬಂಧ ಚೆನ್ನಾಗಿಲ್ಲದ ಕಾರಣ ಧೋನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ, ರವಿಶಾಸ್ತ್ರಿ ಮತ್ತು ಕೊಹ್ಲಿ ನಡುವಿನ ಬಾಂಧವ್ಯದಿಂದಾಗಿ ಧೋನಿ ಬೇಸರಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಆದ್ರೆ ಧೋನಿ ಮತ್ತು ವಿರಾಟ್ ನಡುವಿನ ಬಾಂಧವ್ಯ ಚೆನ್ನಾಗಿಯೇ ಇತ್ತು. ವಿರಾಟ್ ಕೊಹ್ಲಿ ನಾಯಕನಾಗಿದ್ರೂ ಸಲಹೆಗಳನ್ನು ಧೋನಿ ಬಳಿಯಿಂದಲೇ ಪಡೆದುಕೊಳ್ಳುತ್ತಿದ್ದರು. ಇದೇನೂ ಗುಟ್ಟಾಗಿ ಉಳಿದಿಲ್ಲ. ಕೊಹ್ಲಿಯ ಪ್ರತಿ ಯಶಸ್ಸಿನ ಹಿಂದೆ ಧೋನಿಯ ಅಭಯವಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ತಂಡದ ಹಿರಿಯಣ್ಣನಾಗಿ ಧೋನಿ ಅನೇಕ ಬಾರಿ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ್ದಾರೆ. ಈ ನಡುವೆ ಧೋನಿಯಿಂದಲೇ ವಿರಾಟ್ ಕೊಹ್ಲಿ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನಹರಿಸಲು ಪ್ರೇರಣೆಗೊಂಡಿದ್ದು ಎಂಬುದನ್ನು ಕೊಹ್ಲಿಯೇ ಹೇಳಿಕೊಂಡಿದ್ದರು
ಈ ನಡುವೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲೇ ಎಷ್ಟೇ ಪ್ರಬುದ್ಧ ಬ್ಯಾಟ್ಸ್ ಮೆನ್ ಆಗಿ ರನ್ ದಾಖಲಿಸುತ್ತಿದ್ರು. ಧೋನಿ ನಾಯಕತ್ವದಲ್ಲೇ ಪಳಗಿರುವ ಕೊಹ್ಲಿ ಯಶಸ್ಸಿನ ಉತ್ತುಂಗದಲ್ಲಿದ್ರೂ ತಪ್ಪು ಮಾಡುತ್ತಿದ್ದಾಗ ಧೋನಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಇದೊಂದು ಸಣ್ಣ ಉದಾಹರಣೆ.
ಅದು 2016ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ. ಭಾರತ ಈ ಪಂದ್ಯಕ್ಕೆ ಕೇವಲ ನಾಲ್ಕು ಬೌಲರ್ ಗಳನ್ನು ಕಣಕ್ಕಿಳಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೂ ಬೌಲಿಂಗ್ ಮಾಡುವಂತೆ ಧೋನಿ ಚೆಂಡನ್ನು ನೀಡಿದ್ದರು.
ಇಂಗ್ಲೆಂಡ್ನ ಪ್ರಮುಖ ಬ್ಯಾಟ್ಸ್ ಮೆನ್ ಕೇವಿನ್ ಪೀರ್ಟಸನ್ ಅವರನ್ನು ಕೊಹ್ಲಿ ಔಟ್ ಮಾಡಿದ್ದರು. ವೈಡ್ ಯಾರ್ಕರ್ ಎಸೆತದ ಮೂಲಕ ಪೀಟರ್ಸನ್ ಅವರನ್ನು ಲಯತಪ್ಪುವಂತೆ ಮಾಡಿದ್ದರು ವಿರಾಟ್ ಕೊಹ್ಲಿ. ಅದೂ ಅಲ್ಲದೆ ವಿರಾಟ್ ಕೊಹ್ಲಿಯವರು ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು.
ಇದ್ರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ವಿರಾಟ್ ಬೌಲಿಂಗ್ ನಲ್ಲಿ ಪ್ರಯೋಗ ಮಾಡಲು ಶುರು ಮಾಡಿದ್ದರು. ಅದು ಥೇಟ್ ಪರಿಣತ ಬೌಲರ್ಗಳಂತೆ. ಅದರಲ್ಲಿ ಒಂದು ಎಸೆತ ಲೆಗ್ ಸೈಡ್ ವೈಡ್ ಆಗಿ ಬೈಸ್ ರನ್ ಆಗಿ ಇಂಗ್ಲೆಂಡ್ ಸ್ಕೋರ್ ಬೋರ್ಡ್ ಸೇರಿಕೊಂಡಿತ್ತು. ಆಗ ತಕ್ಷಣವೇ ಧೋನಿ ವಿರಾಟ್ ಕೊಹ್ಲಿಯ ಹತ್ತಿರಕ್ಕೆ ಬಂದು, ನಿನಗೆ ಏನು ಹೇಳಿದ್ದೇನೋ ಅದನ್ನು ಮಾಡು.. ಬೌಲರ್ಗಳ ರೀತಿಯಲ್ಲಿ ಪ್ರಯತ್ನ ಪಡಬೇಡ ಎಂದು ವಿರಾಟ್ಗೆ ಮಾತಿನಲ್ಲೇ ಛಾಟಿ ಬೀಸಿದ್ದರು








