ಟೀಮ್ ಇಂಡಿಯಾದ ಭವಿಷ್ಯದ ಚೇತನ…. ಈ ಸಕಾರಿಯಾ..!
ಚೇತನ್ ಸಕಾರಿಯಾ…!
2021ರ ಐಪಿಎಲ್ ನ ಶೋಧ.. ರಾಜಸ್ತಾನ ರಾಯಲ್ಸ್ ತಂಡದ ಪ್ರಮುಖ ವೇಗಿ. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿರುವ ಚೇತನ್ ಎದುರಾಳಿ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗುವ ರೀತಿಯಲ್ಲೇ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ.
ಲಯಬದ್ಧವಾಗಿ ಬೌಲಿಂಗ್ ಮಾಡುವುದರ ಜೊತೆಗೆ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ದಂಗುಬಡಿಸುವ ರೀತಿಯಲ್ಲಿ ಬೌಲಿಂಗ್ ಮಾಡುವ ಸಾಮಥ್ರ್ಯ ಮತ್ತು ಪ್ರತಿಭೆ ಚೇತನ ಸಕಾರಿಯಾನಲ್ಲಿದೆ.
ರಾಜಸ್ತಾನ ರಾಯಲ್ಸ್ ತಂಡದ ನಿದೇರ್ಶಕ ಕುಮಾರ ಸಂಗಕ್ಕರ ಅವರ ಮನ ಗೆದ್ದಿರುವ ಚೇತನ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ವೇಗದ ಅಸ್ತ್ರವಾಗುವುದರಲ್ಲಿ ಎರಡು ಮಾತಿಲ್ಲ.
ಹಾಗೇ ನೋಡಿದ್ರೆ ಚೇತನ್ ಅವರ ಕ್ರಿಕೆಟ್ ಬದುಕು ಕಲ್ಲು ಮುಳ್ಳಿನ ಹಾದಿ. ತೀರಾ ಬಡತನವಿಲ್ಲ.. ಹಾಗೇ ತೀರ ಮಧ್ಯಮ ವರ್ಗವೂ ಅಲ್ಲದ ಕುಟುಂಬದಿಂದ ಬಂದಿರುವ ಚೇತನ್ ಅವರ ತಂದೆ ಸ್ವಂತ ಟೆಂಪೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದ್ರೆ ತಂದೆಯ ಸಂಪಾದನೆಯಿಂದ ಚೇತನ್ ಅವರ ಕ್ರಿಕೆಟ್ ತರಬೇತಿಯ ವೆಚ್ಚಕ್ಕೆ ಸಾಕಾಗುತ್ತಿರಲಿಲ್ಲ. ಆಗ ಅವರ ನೆರವಿಗೆ ಬಂದಿದ್ದು ಚೇತನ್ ಅವರ ಚಿಕ್ಕಪ್ಪ. ಜೊತೆಗೆ ಚೇತನ್ ಅವರು ಚಿಕ್ಕಪ್ಪನವರ ಸ್ಟೇಷನರಿ ಬುಕ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದರು.
ಗುಜರಾತಿನ ಭಾವನಗರದ ಚೇತನ್ ಆಡುತ್ತಿರುವುದು ಸೌರಾಷ್ಟ್ರದ ಪರ. ಸರ್ ಭಾವ್‍ಸಿಂಹಜಿ ಕ್ರಿಕೆಟ್ ಅಕಾಡೆಮಿಯಿಂದ ಹೊರಬಂದಿರುವ ಅಪ್ಪಟ ಪ್ರತಿಭೆ.
ಕ್ರಿಕೆಟ್ ಜೊತೆ ಶೈಕ್ಷಣಿಕವಾಗಿ ಮುಂದಿದ್ದ ಚೇತನ್ ಪಿಯುಸಿ ನಂತರ ಕ್ರಿಕೆಟ್ ಆಟದ ಕಡೆಗೆ ಹೆಚ್ಚಿನ ಆದ್ಯತೆ ನೀಡಿದ್ರು. ಅಲ್ಲದೆ ಚೆನ್ನೈನ ಎಮ್ ಆರ್ ಎಫ್ ಪೌಂಡೇಷನ್ ನಲ್ಲೂ ಐದು ತಿಂಗಳ ಕಾಲ ತರಬೇತಿ ಪಡೆದುಕೊಂಡಿದ್ದರು. ಇದೇ ವೇಳೆ ಸೌರಾಷ್ಟ್ರ ತಂಡದ 19 ವಯೋಮಿತಿ ಮತ್ತು 23 ವಯೋಮಿತಿ ತಂಡದ ಪರ ಆಡಿದ್ದರು. ಅಲ್ಲದೆ ಸೌರಾಷ್ಟ್ರದ ಪರ ಚೊಚ್ಚಲ ರಣಜಿ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಅಷ್ಟೇ ಅಲ್ಲ, ಚೇತನ್ ಸಕಾರಿಯಾ ಅವರು ಕಳೆದ ವರ್ಷ ಆರ್ ಸಿಬಿ ತಂಡದ ನೆಟ್ ಬೌಲರ್ ಆಗಿದ್ದರು. ಆಗ ಡೇಲ್ ಸ್ಟೈನ್ ಮತ್ತು ಉಮೇಶ್ ಯಾದವ್ ಅವರ ಒಡನಾಟ ಬೆಳೆಸಿಕೊಂಡ ಚೇತನ್ ಸಾಕಷ್ಟು ಸಲಹೆ, ಮಾರ್ಗದರ್ಶನಗಳನ್ನು ಪಡೆದುಕೊಂಡಿದ್ದರು.
ಈ ನಡುವೆ ಚೇತನ್ ಸಕಾರಿಯಾಗೆ ಆರ್ ಸಿಬಿ ಕಡೆಯಿಂದಲೂ ಬುಲಾವ್ ಬಂದಿತ್ತು. ಆದ್ರೆ ಕೋವಿಡ್ ಅಡ್ಡಿಯನ್ನುಂಟು ಮಾಡಿತ್ತು. ಇದು ಚೇತನ್ ಅವರಿಗೆ ವರದಾನವಾಗಿಯೇ ಪರಿಣಮಿಸಿತ್ತು. ಯಾಕಂದ್ರೆ ರಾಜಸ್ತಾನ ರಾಯಲ್ಸ್ ತಂಡ 1.2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
ದೇಸಿ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಚೇತನ್, ಐಪಿಎಲ್ ಬಿಡ್ಡಿಂಗ್‍ಗೂ ಮುನ್ನವೇ ಆಘಾತ ಅನುಭವಿಸಿದ್ದರು. ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾಗ ಚೇತನ್ ಅವರ ಗುರಿ ಒಂದೇ ಆಗಿತ್ತು. ಈ ಬಾರಿಯ ಐಪಿಎಲ್ ನಲ್ಲಿ ಆಡಬೇಕು ಎಂಬುದು. ಹೀಗಾಗಿ ಫ್ರಾಂಚೈಸಿಗಳ ಮನ ಗೆಲ್ಲಲು ಚೇತನ್ ಅಮೋಘ ಬೌಲಿಂಗ್ ದಾಳಿ ಕೂಡ ನಡೆಸುತ್ತಿದ್ದರು.
ಇದೇ ವೇಳೆ, ಚೇತನ್ ಅವರ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದರು. ಆದ್ರೆ ಈ ವಿಷ್ಯವನ್ನು ಚೇತನ್ ಅಮ್ಮ ಹೇಳಿರಲಿಲ್ಲ. ಪದೇ ಪದೇ ಊರಿಗೆ ಕರೆ ಮಾಡುತ್ತಿದ್ದಾಗ ನೋವು ಬೇಸರವನ್ನು ಹೃದಯದಲ್ಲಿಟ್ಟುಕೊಂಡು ಮಗನ ಕ್ರಿಕೆಟ್ ಬದುಕಿಗೆ ತೊಂದರೆಯಾಗಬಾರದು ಅಂತ ಚೇತನ್ ಅಮ್ಮ ಹೇಳಿರಲಿಲ್ಲ. ಅಪ್ಪನ ಜೊತೆಗೂ ಮಾತನಾಡಲು ಬಿಡುತ್ತಿರಲಿಲ್ಲ. ಕೊನೆಗೆ ವಿಷ್ಯ ಗೊತ್ತಾಗ ಚೇತನ್ ಸಾಕಷ್ಟು ಘಾಸಿಗೊಂಡಿದ್ದರು.
ಇದೀಗ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ತಮ್ಮನ ಅಕಾಲಿಕ ನಿಧನದಿಂದ ಕಂಗೆಟ್ಟಿರುವ ಚೇತನ್ ಮೈದಾನದಲ್ಲಿ ಎಲ್ಲವನ್ನು ಮರೆತು ಆಡುತ್ತಿದ್ದಾರೆ.
ಒಟ್ಟಿನಲ್ಲಿ ಚೇತನ್ ಸಕಾರಿಯಾ ಐಪಿಎಲ್ ನ ಅನ್ವೇಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾಗೂ ಎಂಟ್ರಿಕೊಟ್ರೂ ಅಚ್ಚರಿ ಏನಿಲ್ಲ. ಯಾಕಂದ್ರೆ ಚೇತನ್ ಸಕಾರಿಯಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡುವ ಎಲ್ಲಾ ಅರ್ಹತೆ, ಸಾಮಥ್ರ್ಯ ಮತ್ತು ಪ್ರತಿಭೆಯೂ ಇದೆ. ಆಲ್ ದಿ ಬೆಸ್ಟ್ ಚೇತನ್