ಟೀಂ ಇಂಡಿಯಾಗೆ ವಿರಾಟ್ ಕಂಬ್ಯಾಕ್.. ರಹಾನೆ – ಪೂಜಾರಾ ಇಬ್ಬರಲ್ಲಿ ಯಾರಿಗೆ ಕೋಕ್ Cheteshwar Pujara saaksha tv
ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಕಾನ್ಪುರದಲ್ಲಿ ಕಿವೀಸ್ ನೀಡಿದ ಹೋರಾಟ ಟೀಮ್ ಇಂಡಿಯಾ ಕೈಯಿಂದ ಗೆಲುವು ಕಿತ್ತುಕೊಂಡಿತ್ತು.
ಈಗ ಟೀಮ್ ಇಂಡಿಯಾ 2ನೇ ಟೆಸ್ಟ್ ಕಡೆಗೆ ಗಮನ ಕೊಡುತ್ತಿದೆ. ಮುಂಬೈನ ವಾಂಖೆಡೆಯಲ್ಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡ ಸೇರಿಕೊಳ್ಳಲಿದ್ದಾರೆ.
ಹೀಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ 11 ಆರಿಸುವುದು ಕೊಂಚ ತಲೆನೋವಾಗಿದೆ,
ವಿರಾಟ್ ಕೊಹ್ಲಿ ಅಲಭ್ಯರಾಗಿದ್ದರಿಂದ ಶ್ರೇಯಸ್ ಅಯ್ಯರ್ ಮೊದಲ ಟೆಸ್ಟ್ ಪಂದ್ಯ ಆಡಿದ್ದರು.
ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಮತ್ತು 2ನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ ಶ್ರೇಯಸ್ ತನ್ನ ಜಾಗವನ್ನು ಗಟ್ಟಿಮಾಡಿಕೊಂಡಿದ್ದಾರೆ.
ಅದರೆ ಈಗ ವಿರಾಟ್ಗೆ ತಂಡದಲ್ಲಿ ಜಾಗ ಕೊಡಬೇಕಿದೆ. ಆದರೆ ಯಾರು ತಂಡದಿಂದ ಹೊರಹೋಗಬೇಕು ಅನ್ನುವ ಚರ್ಚೆ ನಡೆಯುತ್ತಿದೆ.
ಸದ್ಯ ಬೌಲಿಂಗ್ ವಿಭಾಗದಲ್ಲ ಬದಲಾವಣೆಯ ಆಯ್ಕೆ ಇಲ್ಲದೇ ಇರುವುದರಿಂದ ಬ್ಯಾಟಿಂಗ್ ವಿಭಾಗದತ್ತಲೇ ನೋಡಬೇಕಿದೆ.
ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರಾ ಮತ್ತು ಉಪನಾಯಕ ಅಜಿಂಕ್ಯಾ ರಹಾನೆ ಮೊದಲ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದ್ದರು.
ಹೀಗಾಗಿ ಈ ಮೂವರಲ್ಲಿ ಒಬ್ಬರು ವಿರಾಟ್ಗೆ ಜಾಗ ಬಿಟ್ಟುಕೊಡಬೇಕಾಗಿದೆ. ಮಯಾಂಕ್ ಅವಕಾಶ ಪಡೆಯದೇ ಇದ್ದರೆ ಚೇತೇಶ್ವರ ಪೂಜಾರಾ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ.
ಶ್ರೇಯಸ್ ಒನ್ ಡೌನ್ ಸ್ಥಾನ ಪಡೆದುಕೊಳ್ಳಲಿದ್ದಾರೆ. ಇನ್ನು ಪೂಜಾರಾ ತಂಡದಿಂದ ಹೊರಗಿದ್ದರೆ ಕೂಡ ಶ್ರೇಯಸ್ ಒನ್ ಡೌನ್ ನಲ್ಲಿ ಬ್ಯಾಟಿಂಗ್ಗೆ ಬರಬೇಕಾಗಬಹುದು.
ರಹಾನೆ ತಂಡದಿಂದ ಹೊರಗಿದ್ದರೆ ಬ್ಯಾಟಿಂಗ್ ಆರ್ಡರ್ ಬದಲಾಗುವುದಿಲ್ಲ. ಸದ್ಯದ ಲೆಕ್ಕಾಚಾರದಲ್ಲಿ ಅನುಭವವನ್ನು ಗಮನದಲ್ಲಿಟ್ಟುಕೊಂಡು ಅಗರ್ವಾಲ್ ಅವರನ್ನು ತಂಡದಿಂದ ಹೊರಗಿಡುವ ಲೆಕ್ಕಾಚಾರವೇ ನಡೆಯುತ್ತಿದೆ.
ಇನ್ನು ಬೌಲಿಂಗ್ನಲ್ಲಿ ಬದಲಾವಣೆಗೆ ಅವಕಾಶವೇ ಇಲ್ಲ. ಅಕ್ಸರ್, ಅಶ್ವಿನ್ ಮತ್ತು ಜಡೇಜಾ ಬೌಲಿಂಗ್ ಜೊತೆ ಬ್ಯಾಟಿಂಗ್ ಶಕ್ತಿಯನ್ನೂ ತೋರಿಸಿದ್ದಾರೆ.
ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಅನಿವಾರ್ಯ ಅನ್ನುವಂತಾಗಿದೆ. ಹೀಗಾಗಿ ವಿರಾಟ್ ಆಗಮನದಿಂದ ಒಬ್ಬ ಆಟಗಾರ ಸ್ಥಾನ ಕಳೆದುಕೊಳ್ಳುವುದು ಖಚಿತ








