ವಾಷಿಂಗ್ಟನ್: ಕೊರೊನಾದಿಂದಾಗಿ ಚೀನಾದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ಸಾವಿನ ಸಂಖ್ಯೆಯಲ್ಲಿ ಚೀನಾ ಅಮೆರಿಕಾಕ್ಕಿಂತಲೂ ಮುಂದಿದೆ ಎಂದು ಆರೋಪಿಸಿದ್ದಾರೆ.
ವೈಟ್ ಹೌಸ್ ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಸಾವಿನ ಸಂಖ್ಯೆಯಲ್ಲಿ ನಾವು ನಂಬರ್ ಒನ್ ಅಲ್ಲ. ಚೀನಾ ನಂಬರ್ ಒನ್. ಅದನ್ನು ನೀವೂ ಅರ್ಥ ಮಾಡಿಕೊಂಡಿದ್ದೀರಿ. ಚೀನಾ ಅಮೆರಿಕದ ಹತ್ತಿರ ಅಲ್ಲ… ನಮಗಿಂತಲೂ ಮುಂದಿದೆ,’ ಎಂದರು.
‘ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ಇಟಲಿ ಮತ್ತು ಸ್ಪೇನ್‌ನಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಗಳಿದ್ದೂ ಸಾವಿನ ಪ್ರಮಾಣ ಅಧಿಕವಾಗಿದೆ. ಇದೇ ಹೊತ್ತಲ್ಲೇ ಚೀನಾ ಕೇವಲ ಶೇ. 0.33 ಸಾವಿನ ಪ್ರಮಾಣ ಹೊಂದಿದೆ. ಚೀನಾದ ಅಧಿಕೃತ ಸಾವಿನ ಸಂಖ್ಯೆಗಳಿಗಿಂತ ನಿಜವಾದ ಸಂಖ್ಯೆಯೇ ಹೆಚ್ಚಿದೆ. ಇದು ವಾಸ್ತವ,’ ಎಂದು ಟ್ರಂಪ್ ಚೀನಾವನ್ನು ಲೇವಡಿ ಮಾಡಿದರು.
ಇನ್ನು ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಟ್ರಂಪ್, ‘ಇದು ನಿಮಗೂ ಗೊತ್ತು, ನನಗೂ ಗೊತ್ತು ಮತ್ತು ಅವರಿಗೂ ಗೊತ್ತು. ಆದರೆ ನೀವು ವರದಿ ಮಾಡುವುದಿಲ್ಲ. ಏಕೆ ಎಂದು ಪ್ರಶ್ನಿಸಿದರು. ನೀವು ಈ ಬಗ್ಗೆ ವಿವರಣೆ ನೀಡಬೇಕು. ಮುಂದೊಂದು ದಿನ ನಾನು ವಿವರಣೆ ನೀಡುತ್ತೇನೆ,’ ಎಂದರು.








