ಭಾರತದ ಭೂಭಾಗವನ್ನು ಚೀನಾದ ಸೈನಿಕರು ಅತಿಕ್ರಮಿಸಿಲ್ಲ – ಪ್ರಧಾನಿ ಮೋದಿ
ಹೊಸ ದಿಲ್ಲಿ, ಜೂನ್ 20: ಲಡಾಖ್ನ ಪೂರ್ವ ಭಾಗದ ವಾಸ್ತವ ಗಡಿರೇಖೆಯ ಬಳಿಯ ಭಾರತದ ಭೂಭಾಗವನ್ನು ಚೀನಾದ ಸೈನಿಕರು ಅತಿಕ್ರಮಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಡೆದ ಸರ್ವಪಕ್ಷಗಳ ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಭಾರತ ಮಾತೆಯನ್ನು ಭಯಪಡಿಸಲು ಪ್ರಯತ್ನಿಸಿದವರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದ್ದು, ದೇಶದ ಗಡಿರಕ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಿದರು. ದೇಶದ ಗಡಿರಕ್ಷಣೆಗಾಗಿ ಸೈನಿಕರ ಜಮಾವಣೆ, ಕಾರ್ಯಾಚರಣೆ ಅಥವಾ ಪ್ರತಿಕಾರ್ಯಾಚರಣೆ ಏನೆಲ್ಲಾ ಬೇಕು ಅವೆಲ್ಲವನ್ನೂ ಭಾರತೀಯ ಸೇನೆ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಭಾರತ ಶಾಂತಿ ಪ್ರಿಯ ರಾಷ್ಟ್ರ, ನೆರೆಹೊರೆ ರಾಷ್ಟ್ರಗಳೊಂದಿಗೆ ಸ್ನೇಹ, ಸೌಹಾರ್ದಯುತ ಸಂಬಂಧವನ್ನು ಎದುರು ನೋಡುತ್ತದೆ. ಆದರೆ ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ಮಾಡಲು ನೋಡಿದರೆ ಸುಮ್ಮನಿರುವುದಿಲ್ಲ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ ಗಡಿ ರೇಖೆಯ ಬಳಿ ಚೀನಾ ಎಸಗಿರುವ ಹೇಯ ಕೃತ್ಯದಿಂದ ರಾಷ್ಟ್ರವೇ ನೋವನ್ನು ಅನುಭವಿಸಿದೆ ಎಂದರು. ಗಾಲ್ವಾನ್ ನದಿ ಕಣಿವೆ ಬಿಕ್ಕಟ್ಟಿನ ಹಿಂದೆ ಗುಪ್ತಚರ ವಿಭಾಗದ ವೈಫಲ್ಯ ಇರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಗಾಲ್ವಾನ್ ನದಿ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ ನಡೆಸಲಾಯಿತು. ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ನ ಸೋನಿಯಾ ಗಾಂಧಿ, ಎನ್ ಸಿಪಿಯ ಶರದ್ ಪವಾರ್, ಟಿಆರ್ಎಸ್ನ ಕೆ. ಚಂದ್ರಶೇಖರ ರಾವ್, ಜೆಡಿಯುನ ನಿತೀಶ್ ಕುಮಾರ್, ಡಿಎಂಕೆಯ ಎಂ.ಕೆ. ಸ್ಟಾಲಿನ್, ವೈಎಸ್ಆರ್ ಕಾಂಗ್ರೆಸ್ನ ಜಗನ್ಮೋಹನ್ ರೆಡ್ಡಿ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಸೇರಿದಂತೆ ದೇಶದ ಪ್ರಮುಖ 20 ಪಕ್ಷದ ನಾಯಕರು ಪಾಲ್ಗೊಂಡಿದ್ದರು.
ಸರ್ವಪಕ್ಷ ಸಭೆ ಆರಂಭಕ್ಕೂ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಎದ್ದುನಿಲ್ಲುವ ಮೂಲಕ ಗಾಲ್ವಾನ್ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಿದರು. ಗಾಲ್ವಾನ್ ನದಿ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ತಮ್ಮ ಬೆಂಬಲವಿರುವುದಾಗಿ ಎಲ್ಲ ಪ್ರತಿಪಕ್ಷಗಳು ಮತ್ತು ಎನ್ ಡಿಎನ ಮಿತ್ರಪಕ್ಷಗಳು ಒಪ್ಪಿಗೆ ಸೂಚಿಸಿದವು.