ಅರ್ಜುನ ಪ್ರಶಸ್ತಿಗೆ ಭಾಜನರಾಗುತ್ತಿರುವ ಚಿರಾಗ್ ಶೆಟ್ಟಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಪುರುಷೋತ್ತಮ ರೈ
ಹೊಸದಿಲ್ಲಿ, ಅಗಸ್ಟ್24: ಕೋವಿಡ್ -19 ಸಾಂಕ್ರಾಮಿಕದ ನಡುವೆ ಈ ಬಾರಿ ಆಗಸ್ಟ್ 29 ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ. ಈ ಬಾರಿ ಅತ್ಯುನ್ನತ ಕ್ರೀಡಾಪ್ರಶಸ್ತಿ ರಾಜೀವ್ ಗಾಂಧಿ ಖೇಲ್‌ರತ್ನಕ್ಕೆ ಐವರು ಭಾಜನರಾಗುತ್ತಿದ್ದಾರೆ ಮತ್ತು 27 ಮಂದಿ ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. ಪ್ರತಿ ವರ್ಷ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗುತ್ತಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ವರ್ಚ್ಯುವಲ್ ಕಾರ್ಯಕ್ರಮದ ಮೂಲಕ ಈ ಬಾರಿ ಪ್ರಧಾನ ಮಾಡಲಾಗುತ್ತಿದೆ.

ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕರ್ನಾಟಕ ಮೂಲದ ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಮತ್ತು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಪುತ್ತೂರು ಸೂತ್ರಬೆಟ್ಟುವಿನ ಕೋಚ್ ಪುರುಷೋತ್ತಮ ರೈ ಪಾತ್ರರಾಗುತ್ತಿದ್ದಾರೆ.
ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ವಿಜೇತರಲ್ಲಿ ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಕೂಡ ಒಬ್ಬರು. ಇವರು ಮೂಲತಃ ಉಡುಪಿ ಜಿಲ್ಲೆಯ ಉಚ್ಚಿಲದವರು. ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಇವರು ಬ್ಯಾಡ್ಮಿಂಟನ್‌ನಲ್ಲಿ ಅಮೋಘ ಸಾಧನೆಯಿಂದ ಮಿಂಚುತ್ತಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸೂತ್ರಬೆಟ್ಟುವಿನ ಕೋಚ್ ಪುರುಷೋತ್ತಮ ರೈ ಅವರು ಕರ್ನಾಟಕದ ಮಾಜಿ ಆ್ಯತ್ಲೆಟಿಕ್ಸ್ ತರಬೇತುದಾರರಾಗಿದ್ದು, ಏಷ್ಯನ್ ಗೇಮ್ಸ್, ಸ್ಯಾಫ್ ಗೇಮ್ಸ್, ಏಷ್ಯ ಮಟ್ಟದ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ತಯಾರು ಮಾಡಿದ್ದಾರೆ .








