ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಪ್ರಮಾಣ ವಚನ…
ಭಾರತದ 50ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಡಿ ವೈ ಚಂದ್ರಚೂಡ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು 10 ನವೆಂಬರ್ 2024 ವರೆಗೂ ಅಧಿಕಾರಾವಧಿಯಲ್ಲಿರಲಿದ್ದಾರೆ.
ಅಕ್ಟೋಬರ್ 8 ರಂದು ಮಾಜಿ ಸಿಜೆಐ ಯುಯು ಲಲಿತ್ ಅವರು ಚಂದ್ರಚೂಡ್ ಹೆಸರನ್ನು ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಶಿಫಾರಸು ಮಾಡಿದರು. ಯುಯು ಲಲಿತ್ ಅವರು ಖುದ್ದು ತಮ್ಮ ಪತ್ರದ ಪ್ರತಿಯನ್ನು ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಎಸ್‌ಸಿ ನ್ಯಾಯಾಧೀಶರ ಸಮ್ಮುಖದಲ್ಲಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಚಂದ್ರಚೂಡ್ ಅವರ ತಂದೆ ಸಹ ಸಿಜೆಐ
ನ್ಯಾಯಮೂರ್ತಿ ಚಂದ್ರಚೂಡ್ ಅವರ ತಂದೆ ನ್ಯಾಯಮೂರ್ತಿ ವೈವಿ ಚಂದ್ರಚೂಡ್ ಅವರು ಸಹ ದೇಶದ 16 ನೇ ಸಿಜೆಐ ಆಗಿದ್ದರು. ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್ ಅವರು 1978 ರಿಂದ 1985 ರವರೆಗೆ ಸುಮಾರು 7 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ತಂದೆ ನಿವೃತ್ತಿಯ 37 ವರ್ಷಗಳ ನಂತರ, ಅವರ ಪುತ್ರ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅದೇ ಹುದ್ದೆಗೆ ನೇಮಕವಾಗಿದ್ದಾರೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು 11 ನವೆಂಬರ್ 1959 ರಂದು ಜನಿಸಿದರು. ದೆಹಲಿ ವಿಶ್ವವಿದ್ಯಾಲಯದಿಂದ LLB ಮಾಡಿದ್ದಾರೆ. 1998 ರಲ್ಲಿ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ನಾಮನಿರ್ದೇಶನಗೊಂಡರು. ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಮೇ 2016 ರಲ್ಲಿ, ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾದರು.
ಪ್ರಸ್ತುತ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರಾಗಿದ್ದ ಇವರು ಶಬರಿಮಲೆ, ಸಲಿಂಗಕಾಮ, ಆಧಾರ್ ಮತ್ತು ಅಯೋಧ್ಯೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಅವರು ಭಾಗಿಯಾಗಿದ್ದಾರೆ.
CJI Chandrachud: DY Chandrachud sworn in as the 50th Chief Justice of India…








