ಬೆಂಗಳೂರು: ಭಾರತೀಯ ಚಲನಚಿತ್ರರಂಗದ ಶ್ರೇಷ್ಠ ಗಾಯಕ ಸಂಗೀತದ ದೊರೆಗೆ ರಾಜ್ಯದ ಸಿಎಂ ಬಿಎಸ್ ಯಡಿಯೂರಪ್ಪನವರು ಸಂತಾಪ ಸೂಚಿಸಿದ್ದಾರೆ. “ತಮ್ಮ ಅಸಾಧಾರಣ ಕಂಠಸಿರಿಯಿಂದ ವಿಶ್ವದಾದ್ಯಂತ ಸಂಗೀತಪ್ರಿಯರ ಮನೆಮನಗಳಲ್ಲಿ ಸ್ಥಾನಪಡೆದ ಗಾನಗಂಧರ್ವ, ಭಾರತದ ಹೆಮ್ಮೆ, ಪದ್ಮಭೂಷಣ ಡಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ವಿಧಿವಶರಾಗಿರುವುದು ಇಡೀ ಭಾರತೀಯ ಕಲಾಲೋಕಕ್ಕೆ ಎಂದೂ ತುಂಬಲಾಗದ ನಷ್ಟ. ಅಕ್ಷರಗಳಲ್ಲಿ ಹಿಡಿದಿಡಲಾಗದಷ್ಟು ಸಾಧನೆ ಮಾಡಿದ್ದ ಎಸ್.ಪಿ.ಬಿ ತಮ್ಮ ಗೀತೆಗಳ ಮೂಲಕ ಅಮರರಾಗಿದ್ದಾರೆ” ಎಂದಿದ್ದಾರೆ.
ಅಲ್ಲದೇ ‘ಮುಂದಿನ ಜನ್ಮ ಅನ್ನೋದು ಇದ್ದರೆ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಋಣ ತೀರಿಸುವೆ’ ಎಂದು ಕನ್ನಡಿಗರ ಮೇಲಿನ ತಮ್ಮ ಪ್ರೀತಿ ಅಭಿಮಾನಗಳನ್ನು ವ್ಯಕ್ತಪಡಿಸುತ್ತಿದ್ದ ಎಸ್.ಪಿ.ಬಿ ನಿಧನಕ್ಕೆ ಇಡೀ ನಾಡು ಕಂಬನಿ ಮಿಡಿಯುತ್ತಿದೆ. ಸರಿಸಾಟಿಯಿಲ್ಲದ ಆ ಮಹಾನ್ ಗಾಯಕನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತೇನೆ”. ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನೂ “ಅವರ ಕುಟುಂಬದವರಿಗೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಅವರ ಅಭಿಮಾನಿಗಳಲ್ಲಿ ಒಬ್ಬನಾಗಿ ಪ್ರಾರ್ಥಿಸುತ್ತಾ, ಆ ಮಹಾನ್ ಸಾಧಕನಿಗೆ ನನ್ನ ನುಡಿನಮನಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.