ಮಲೆನಾಡಿನ ದೈವಿಕ ಪರಿಸರ ಹಾಳು ಮಾಡಿ ನೀವೇನು ಚಂದ್ರಲೋಕದಲ್ಲಿ ಮನೆ ಕಟ್ಟಿಕೊಳ್ತೀರಾ? ಜೋಗ ಅಭಿವೃದ್ಧಿ ಯೋಜನೆ ಎನ್ನುವ ಮಾಯಾಜಿಂಕೆಯ ಸುತ್ತಾ:
ಒಮ್ಮೆ ಮಲೆನಾಡಿನ ನಾಡಿಮಿಡಿತ, ನಮ್ಮ ಹೆಮ್ಮೆಯ ಸಾಹಿತಿಗಳು, ಗುರುವರ್ಯರೂ ಆದ ಡಾ. ನಾ. ಡಿಸೋಜಾ ಹೇಳುತ್ತಿದ್ದರು. ಜೋಗದ ಬೆಟ್ಟದಲ್ಲಿ ಮತ್ತು ಸುತ್ತಮುತ್ತ ಸುಮಾರು 1 ಸಾವಿರ ವೈವಿಧ್ಯಮಯ ಚಿಟ್ಟೆಗಳಿವೆ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಅತ್ಯಂತ ಅಪರೂಪದ ಗಿಡಮೂಲಿಕೆಗಳ ಭಂಡಾರವೇ ಇದೆ. ಅನೇಕ ಜಾತಿಯ, ಇನ್ನೂ ಕಂಡುಹಿಡಿಯಲಾಗದ ಜಾತಿಯ ಕಪ್ಪೆಗಳಿವೆ. ವಿಭಿನ್ನ ಜಾತಿಯ ಹಾವುಗಳಿವೆ. ಇವೆಲ್ಲವನ್ನು ಪೊರೆಯುತ್ತಿರುವುದು ಮಲೆನಾಡಿನ ಜೀವನದಿ ಶರಾವತಿ ಮತ್ತು ಜೋಗದ ದೃಢವಾದ ಬಂಡೆಗಾಳಾವೃತ ದಿವಿನಾದ ಬೆಟ್ಟ ಮತ್ತು ಕಣಿವೆ. ಇಲ್ಲಿ ಮನುಷ್ಯ ಎಷ್ಟು ಕಡಿಮೆ ಹೋಗುತ್ತಾನೋ, ಅಷ್ಟೇ ವಿಫುಲವಾಗಿ ಪರಿಸರ ರಕ್ಷಣೆಯಾಗುತ್ತದೆ. ಆದರೆ ಯಾವಾಗ ಜೋಗ ಅಭಿವೃದ್ಧಿ ಯೋಜನೆ ಅನ್ನುವ ಯೋಜನೆ ಶುರುವಾಯ್ತೋ, ಆವತ್ತಿಂದನೇ ಪರಿಸರದ ವ್ಯಾಪ್ತಿ ವಿಸ್ತಾರದ ಹರಡುವಿಕೆ ಕುಂಠಿತಗೊಂಡಿತು.
ಡಾ. ನಾ. ಡಿಸೋಜಾರನ್ನು ನಾವು ಶರಾವತಿ ಸಂತ ಎಂದೇ ಕರೆಯುತ್ತೇವೆ. ಮಲೆನಾಡು ಮತ್ತು ಶರಾವತಿ ಪರಿಸರ ಹಾಗೂ ಸಂಸ್ಕೃತಿಯನ್ನು ಅವರಷ್ಟು ಆಳವಾಗಿ ಅರ್ಥ ಮಾಡಿಕೊಂಡವರು ಮತ್ತೊಬ್ಬರಿಲ್ಲ. ನಾವು ಹೆಸರೇ ಕೇಳದ ಶರಾವತಿ ಕೊಳ್ಳದ ಸಣ್ಣ ಸಣ್ಣ ಅರಣ್ಯ ಪ್ರದೇಶ, ಅದರೊಳಗೆ ಹುದುಗಿರುವ ಅಪರಿಚಿತ ಕಾಡಿನ ಮಕ್ಕಳ ಜನವಸತಿಯನ್ನು ನಡೆದಾಡಿ ಬಂದವರು ನಾಡಿ. ಶರಾವತಿ ಮುಳುಗಡೆ ಸಂತ್ರಸ್ತರ ಗೋಳನ್ನು ಜಗತ್ತಿಗೆ ಮೊದಲು ಹೇಳಿದವರೂ ನಾಡಿಯೇ. ಶರಾವತಿ ಮತ್ತು ಶರಾವತಿ ಕಣಿವೆ ಅಭಯಾರಣ್ಯದ ಕುರಿತಾಗಿ ಇವತ್ತಿಗೂ ಅಷ್ಟೇ ಅಥಾರಟೇಟಿವ್ ಆಗಿ ನಾಡಿ ಮಾತಾಡುತ್ತಾರೆ. ಪ್ರಾಯಶಃ ಮಲೆನಾಡಿಗೆ ಬರುವ ಯಾವುದೇ ಅರಣ್ಯಾಧಿಕಾರಿ, ಸಸ್ಯ ಸಂಶೋಧಕ ಅಥವಾ ವನ್ಯಜೀವಿ ಅಧ್ಯಯನಕಾರ ಮೊದಲು ನಾ ಡಿಸೋಜಾರನ್ನು ಭೇಟಿಯಾಗಿಯೇ ಮುಂದುವರೆದರೆ ಅವರ ಕೆಲಸ ಅರ್ಧ ಸಲೀಸು.
ಇಷ್ಟನ್ನು ಏಕೆ ಹೇಳಿದೆ ಎಂದರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಮೂಲದವರೇ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಅವರ ಸುಪುತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಇವರಿಬ್ಬರು ಅಪ್ಪ-ಮಗ ಸೇರಿ ಮಾಡಿದ ಮಹತ್ಸಾಧನೆ ಎಂದರೆ ಶರಾವತಿ ಭೂಗರ್ಭ ಯೋಜನೆ ಮತ್ತು ಜೋಗದ ಅಭಿವೃದ್ದಿ ಎನ್ನುವ ಮತ್ತೊಂದು ಪರಮ ಮೂರ್ಖ ಯೋಜನೆ. ಈಗಾಗಲೇ ಅಭಿವೃದ್ಧಿಯಾಗಿರುವ ಜೋಗ ಟೂರಿಸಂ ಅನ್ನು ಮತ್ತೆ ಅಭಿವೃದ್ದಿ ಮಾಡುವ ಅಗತ್ಯವೇನು ಅನ್ನುವುದೇ ಗೊತ್ತಾಗುತ್ತಿಲ್ಲ. ಇನ್ನು ಶರಾವತಿ ಭೂಗರ್ಭ ಯೋಜನೆ ಏನಾದರೂ ಕಾರ್ಯಗತಗೊಂಡರೇ ಅದಕ್ಕಿಂತ ದೊಡ್ಡ ಸರ್ವನಾಶ ಶರಾವತಿಗೆ ಮತ್ತು ಮಲೆನಾಡಿಗೆ ಇನ್ನೊಂದಿಲ್ಲ.
ಆಯ್ತು! ಈಗ ಜೋಗ ಅಭಿವೃದ್ಧಿ ಯೋಜನೆ ಎಂಬ ಹೊಸ ಪ್ರಸ್ತಾವನೆ ವಿಚಾರಕ್ಕೆ ಬರೋಣ. ಇದು ಸುಮಾರು 120 ಕೋಟಿ ರೂಪಾಯಿ ಯೋಜನೆಯಂತೆ. ಪ್ರವಾಸಿಗರು ವರ್ಷ ಪೂರ್ತಿ ಜಲಪಾತ ವೀಕ್ಷಣೆ ಮಾಡಬಹುದಂತೆ. ನಂಗೆ ಈ ಮೊದಲ ಅಂಶವೇ ಅರ್ಥವಾಗುತ್ತಿಲ್ಲ. ನಾವೆಲ್ಲಾ ಬೆಳೆದಿದ್ದೇ ಜೋಗದ ಮೈದಡವಿನಲ್ಲಿ. ನಾವು ಕಂಡ ಹಾಗೇ ಜೋಗ ಜಲಪಾತದಲ್ಲಿ ನೀರು ಭೋರ್ಗರೆದೋ ಅಥವಾ ಕ್ಷೀಣವಾಗಿಯೋ ಸುರಿಯುವುದೇ ವರ್ಷದ ಮೊದಲ ಐದಾರು ತಿಂಗಳು ಮಾತ್ರ. ನಾವು ಕಾಲೇಜು ಕಲಿಯುತ್ತಿದ್ದಾಗ ವಾರ ವಾರ ಜೋಗಕ್ಕೆ ಹೋಗುತ್ತಿದ್ದೆವು. ಈಗಿನಂತೆ ಮೆಟ್ಟಿಲುಗಳಿರಲಿಲ್ಲವಾದರೂ ಕಡಿದಾದ ಬೆಟ್ಟವನ್ನು ಕೊರೆದ ಪಾಚಿಗಟ್ಟಿದ ಬಂಡೆ ಕೊರೆತವನ್ನು ದಾಟಿ ಇಳಿಯುತ್ತಿದ್ದೆವು. ಆಗ ಶರಾವತಿ ಒಡಲಲ್ಲಿ ಭರ್ತಿ ನೀರು ಹರಿಯುತ್ತಿತ್ತು. ಈಗ 15 ವರ್ಷಗಳ ನಂತರ ಶರಾವತಿ ಕೊಳ್ಳದ ಮಳೆಕಾಡನ್ನು ಸತತವಾಗಿ ನಾಶ ಮಾಡಿದ ಪರಿಣಾಮ ಅದರ ಪ್ರಮಾಣ ಸರಾಸರಿ ಅರ್ಧಕ್ಕಿಳಿದಿದೆ. ಆದರೂ ನಿಮಗೆ ಅಕ್ಟೋಬರ್ ಅಂತ್ಯದ ತನಕ ಜೋಗದ ಪರ್ವತದಿಂದ ಧುಮ್ಮಿಕ್ಕುವ ಶರಾವತಿ ದರ್ಶನ ಕೊಡುತ್ತಾಳೆ. ಆನಂತರ ನವೆಂಬರ್ ನಿಂದ ಮುಂದಿನ ಜೂನ್ ವರೆಗೆ ಜೋಗದ ಬೆಟ್ಟ ನಿರ್ವಾಣನಾಗಿ ನಿಂತ ಗೊಮ್ಮಟೇಶ್ವರನಂತೆ ಕಾಣುತ್ತದೆ. ಕೊನೆಯ ಆರು ತಿಂಗಳು ಜೋಗಕ್ಕೆ ಯಾವ ಪ್ರವಾಸಿಗರೂ ಬರವುದಿಲ್ಲ.
ಇಷ್ಟಾಯಿತಲ್ಲ, ಈಗ ವರ್ಷ ಪೂರ್ತಿ ಪ್ರವಾಸಿಗರು ಬರಬೇಕೆಂದರೆ ನಲ್ಲಿಯಲ್ಲಿ ಬಿಟ್ಟ ನೀರಿನಷ್ಟಾದರೂ ಜೋಗದಲ್ಲಿ ನೀರು ಸುರಿಯಬೇಕಲ್ಲ. ಅದಕ್ಕೇನು ಮಾಡುತ್ತಾರೆ? ದುಬೈನ ಶೆಟ್ಟರು ಹಿಂದೆ ಸೀತಾಕಟ್ಟೆಯಲ್ಲಿ ಆಣೆಕಟ್ಟೊಂದು ಕಟ್ಟಿ, ನೀರನ್ನು ಸಂಗ್ರಹಿಸಿ, ವರ್ಷ ಪೂರ್ತಿ ಜೋಗದ ಬೆಟ್ಟದ ಮೇಲೆ ಕೊಳವೆಯಲ್ಲಿ ಹರಿಸಿ ಸರ್ವ ಋತು ಜೋಗ ಮಾಡುತ್ತೇನೆ ಅಂತ ಹಿಂದೆ ಹೇಳುತ್ತಿದ್ದರು. ಅದೆಂತಹ ಮೂರ್ಖ ಯೋಜನೆಯಾಗಿತ್ತೆಂದರೆ ನೋಡ ನೋಡುತ್ತಿದ್ದಂತೆ ಜೋಗದ ಪರಿಸರ ಪ್ರಕೃತಿ ಸೌಂದರ್ಯ ನಾಶವೆದ್ದು ಹೋಗುತ್ತಿತ್ತು. ಆ ದರಿದ್ರ ಯೋಜನೆಗೆ ಬಿ.ಆರ್ ಶೆಟ್ಟರು 200 ಕೋಟಿ ಮೀಸಲಿಟ್ಟಿದ್ದರಂತೆ. ಪುಣ್ಯವಶಾತ್ ಶರಾವತಿಯ ಶಾಪವೋ ಏನೋ ದುಬೈ ಶೆಟ್ಟರು ದೀವಾಳಿ ಎದ್ದು ಹೋದರು. ಈಗ ಸರ್ಕಾರ ಮತ್ತದೇ ಸರ್ವ ಋತು ಯೋಜನೆಗೆ ಜೀವ ಕೊಡಲಿದೆಯೇ? ಗೊತ್ತಿಲ್ಲ.
ಇನ್ನು ದೀಪಾಲಂಕಾರವಂತೆ, ಕಾರಂಜಿಯಂತೆ, ವಾಚ್ ಟವರ್ ಗಳಂತೆ. ಪಾರ್ಕಿಂಗ್, ವಸತಿಗೃಹ, ಪಾರ್ಕ್, ಮಕ್ಕಳ ಉದ್ಯಾನವನ, ದೋಣಿ ವಿಹಾರ, ಸಾಹಸ ಕ್ರೀಡೆ ಇತ್ಯಾದಿ ಬ್ಲಾ ಬ್ಲಾ ಬ್ಲಾ. ಮಾಡಿಕೊಂಡು ಹೋಗಲಿ. ಇದರಲ್ಲಿ ಅರ್ಧದಷ್ಟು ಈಗಾಗಲೇ ಇವೆ. ಅವನ್ನೇ ಅಭಿವೃದ್ಧಿ ಮಾಡಿದರೂ ಸಾಕು. ಇವಕ್ಕೆಲ್ಲಾ
ಅಷ್ಟೇನೂ ಖರ್ಚೂ ಸಹ ಆಗುವುದಿಲ್ಲ. ಒಂದಷ್ಟು ಕಮಿಷನ್ ಹೊಡೆಯುವ ಸ್ಕೀಂ ಮತ್ತೊಂದಷ್ಟು ಕಾಡು ಕಡಿದು ಮುಂಡಾ ಮೋಚ್ತಾರೆ. ಅದಲ್ಲ ಅಪಾಯ! ಜೋಗದ ಗುಂಡಿಗೆ ಜಿಪ್ ಲೈನ್ ಮಾಡ್ತಾರಂತೆ ಜೊತೆಗೆ ಕೇಬಲ್ ಕಾರ್ ಸಹ ಉಂಟಂತೆ. ಈ ನೆಪದಲ್ಲಿ ಅದಿನ್ನೆಷ್ಟು ಉಪದ್ವ್ಯಾಪಗಳನ್ನು ಸೃಷ್ಟಿಮಾಡ್ತಾರೋ ಜಗನ್ಮಾತೆಯೇ ಬಲ್ಲಳು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮತ್ತು ಸಂಸದ ಬಿ.ವೈ.ರಾಘವೇಂದ್ರರಿಗೆ ಮಲೆನಾಡಿನ ಕುರಿತಾದ ಒಂದಷ್ಟಾದರೂ ಕಾಳಜಿ ಇದ್ದರೇ, ನಾಶವಾಗುತ್ತಿರುವ ಶರಾವತಿ ಕೊಳ್ಳದ ಮಳೆಕಾಡುಗಳನ್ನು ಉಳಿಸಿಕೊಳ್ಳಲಿ. ಶರಾವತಿ ಭೂಗರ್ಭ ಯೋಜನೆಯನ್ನು ನಿಲ್ಲಿಸಲಿ. ಮಲೆನಾಡಿನಲ್ಲಿ ರಾಕ್ಷಸ ದಾಳಿ ನಡೆಸುತ್ತಿರುವ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ. ಮಳೆಗಾಲದಲ್ಲಿ ಒಂದೇ ಒಂದು ಕಾಲು ಸಂಕವೂ ಗತಿಯಿಲ್ಲದೇ ಪರದಾಡುವ ಕಾಡಿನ ನಡುವಿನ ಹಳ್ಳಿಗಳಿಗೆ ಕಿರು ಸೇತುವೆ ಮಾಡಿಕೊಡಲಿ. ಮಲೆನಾಡಿಗೆ ಅಭಿವೃದ್ಧಿ ಅನ್ನುವ ಮಾಯಾಜಿಂಕೆ ಖಂಡಿತಾ ಅಗತ್ಯವಿಲ್ಲ. ಮಲೆನಾಡಿನ ನೆಮ್ಮದಿ ಹಾಳು ಮಾಡುವ ಯಾವುದೇ ಪ್ರವಾಸೋದ್ಯಮ ಯೋಜನೆಗಳೂ ಬೇಡ. ಅಲ್ಲಿ ಬರುವ ಯಾವುದೇ ಪ್ರವಾಸಿಗರು ಈಗಾಗಲೇ ಮಾಲಿನ್ಯಗೊಳ್ಳುತ್ತಿರುವ ಪರಿಸರವನ್ನು ಮತ್ತಷ್ಟು ಮಲಿನ ಮಾಡುತ್ತಾರಷ್ಟೆ. ಇದೊಂದು ಕೇವಲ ದುಡ್ಡು ದೋಚಿಕೊಳ್ಳುವ ಯೋಜನೆ ಮಾತ್ರವೇ ಆಗಿದ್ದರೇ, ಅದೇನು 120 ಕೋಟಿ ಯೋಜನಾ ಮೊತ್ತವಿದೆಯೋ ಅದನ್ನು ನೀವು ನೀವೇ ಹಂಚಿಕೊಂಡು ಬಿಡಿ. ಮಲೆನಾಡಿನ ದೈವಿಕ ಪರಿಸರವನ್ನು ಮಾತ್ರ ದಯವಿಟ್ಟು ನಾಶ ಮಾಡದಿರಿ.
–ವಿಭಾ (ವಿಶ್ವಾಸ್ ಭಾರದ್ವಾಜ್)








