Bangalore | ಮತ್ತೊಬ್ಬ ರಾಣಿ ಕುರಿತು ಪಠ್ಯದಲ್ಲಿ ಅಳವಡಿಸಲು ಚಿಂತನೆ
ಬೆಂಗಳೂರು : ಕಿತ್ತೂರು ರಾಣಿ ಚೆನ್ನಮ್ಮರಂತೆ ಕೆಳದಿ ರಾಣಿ ಚೆನ್ನಮ್ಮ ನವರ ಹೋರಾಟ, ಕ್ಷಮಾಗುಣಗಳು ಆದರ್ಶನೀಯವಾಗಿವೆ.
ಹೀಗಾಗಿ ಕೆಳದಿ ರಾಣಿ ಚೆನ್ನಮ್ಮನವರ ಬಗ್ಗೆ ಪಠ್ಯದಲ್ಲಿ ಅಳವಡಿಸುವ ಕುರಿತು ಶಿಕ್ಷಣ ಇಲಾಖೆ ಸಂಬಂಧಪಟ್ಟವರೊಂದಿಗೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣದಲ್ಲಿ ಚೆನ್ನಮ್ಮನವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಮೂರು ಬಾರಿ ಮೊಘಲರು ಆಕ್ರಮಣ ಮಾಡಿದರೂ, ನಂತರ ಪ್ರಾಣ ಭಿಕ್ಷೆ ಬೇಡಿ ಬಂದಾಗ ಮೊಘಲ್ ಸಾಮ್ರಾಜ್ಯದ ಶಿವಾಜಿ ಮಗ ರಾಜಾರಾಮನಿಗೆ ಆಶ್ರಯ ನೀಡಿ ಕ್ಷಮಿಸಿದ ಹೃದಯ ವೈಶಾಲ್ಯತೆ ಒಬ್ಬ ಮಹಿಳೆ ಕಂದಾಚಾರವನ್ನು ಬಿಟ್ಟು ಪ್ರಗತಿಪರವಾದ ಚಿಂತನೆಗಳಿಂದ ಆ ಕಾಲದಲ್ಲಿ ತನ್ನ ಗಟ್ಟಿ ನಿಲುವನ್ನು ತೋರಿದ ರೀತಿ ರೋಮಾಂಚನಕಾರಿಯಾಗಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಇವರ ಬಗ್ಗೆ ತಿಳಿಸುವ ಅಗತ್ಯವಿದೆ. ಹೀಗಾಗಿ ಕೆಳದಿ ರಾಣಿ ಚೆನ್ನಮ್ಮನವರ ಬಗ್ಗೆ ಪಠ್ಯದಲ್ಲಿ ಅಳವಡಿಸುವ ಕುರಿತು ಶಿಕ್ಷಣ ಇಲಾಖೆಯ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
CM BASAVARAJ BOMMAI THOUGHT TO INCLUDE KELADI RANI CHENNAMMA TEXT IN EDUCATION