Shivakumar Swamiji: ಮಧ್ಯಾಹ್ನದ ಬಿಸಿ ಊಟಕ್ಕೆ ಶಿವಕುಮಾರ ಶ್ರೀಗಳ ಹೆಸರು
1 min read
ಮಧ್ಯಾಹ್ನದ ಬಿಸಿ ಊಟಕ್ಕೆ ಶಿವಕುಮಾರ ಶ್ರೀಗಳ ಹೆಸರು
ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಏಪ್ರಿಲ್ 1 ಅನ್ನು ದಾಸೋಹ ದಿನ ಹಾಗೂ ಮಧ್ಯಾಹ್ನದ ಬಿಸಿ ಊಟಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಬಿಸಿಯೂಟ ಯೋಜನೆ ಎಂದು ಹೆಸರಿಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪರಮಪೂಜ್ಯ ಶ್ರೀ ಶಿಕುಮಾರ ಸ್ವಾಮಿಜಿಗಳ 115ನೇ ಜನ್ಮದಿನೋತ್ಸವ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರೀಗಳು ದೈವಿ ಪುರುಷರು, ಮನುಷ್ಯ ಶಕ್ತಿ ಅಲ್ಲ ಶ್ರೀಗಳ ಧ್ಯೇಯ ಶ್ರದ್ಧೆ, ನಿಷ್ಠೆ, ಪರಿಶ್ರಮವನ್ನು ನಾವು ಪರಿಪಾಲನೆ ಮಾಡಬೇಕು. ಶ್ರೀಗಳಿಗೆ ಜಾತಿ ಭೇದ ಇರಲಿಲ್ಲ. ಸರ್ವೋದಯ ಪರಿಕಲ್ಪನೆ ಈ ಮಠದಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.
ಅಲ್ಲದೇ ಸರ್ವೋದಯ ಮತ್ತು ಅಂತೋದ್ಯಯ ಈ ಮಠದಲ್ಲಿ ನಡೆಯುತ್ತಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ್ ಸ್ವಾಮೀಜಿ ಹೆಸರಿಡಲಾಗುವುದು ಎಂದು ಘೋಷಿಸಿದರು
ನಾನು ಭಕ್ತನಾಗಿ ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ನೆಲದಲ್ಲಿ ಪ್ರೇರಣೆಯ ಶಕ್ತಿ ಇದೆ. ಶಿವಕುಮಾರ್ ಶ್ರೀಗಳ ಪರಂಪರೆಯನ್ನು ಕಿರಿಯ ಶ್ರೀಗಳು ಮುಂದುವರಿಸುತ್ತಿದ್ದಾರೆ. ದೇಶದಲ್ಲೇ ಯಾರೂ ಕೂಡಾ ಈ ರೀತಿ ಸೇವೆ ಮಾಡಿರಲಿಲ್ಲ. ಅದಕ್ಕಾಗಿಯೇ ಅವರನ್ನು ನಡೆದಾಡುವ ದೇವರು ಎನ್ನುತ್ತೇವೆ. ಅವರು ಹಚ್ಚಿದ ಒಲೆಯ ಕಿಚ್ಚು ಬಡವರ ಹಸಿವಿನ ಕಿಚ್ಚು ನಿಗಿಸುತ್ತಿದೆ. ಅನ್ನ, ಅಕ್ಷರ, ಆಶ್ರಯ ಎಂಬುದನ್ನು ಪಾಲಿಸಿದವರು ಸಿದ್ದಗಂಗಾ ಶ್ರೀಗಳು ಎಂದು ಸ್ಮರಿಸಿದರು.
ಇಂದು ಕೂಡಾ ಸಿದ್ದಗಂಗಾ ಶ್ರೀಗಳು ನಮ್ಮ ಜೊತೆ ಇದ್ದಾರೆ. ಅವರು ಲಿಂಗೈಕ್ಯರಾಗಿದ್ದಾರೆ ಅಂತ ನಾನು ಹೇಳುವುದಿಲ್ಲ. ಅವರು ನಮ್ಮ ಜೊತೆ ಇರುತ್ತಾರೆ. ಅವರ ನಡೆ ನಮಗೆ ದಾರಿದೀಪ ಆಗುತ್ತದೆ. ಬದುಕಿನ ದಾರಿ ತೋರಿಸಿದವರು ಸಿದ್ದಗಂಗಾ ಶ್ರೀಗಳು ಎಂದು ತಿಳಿಸಿದರು.