ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾದ ಪರಿಣಾಮ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರಮುಖವಾಗಿ ಕುಂದಾನಗರಿ ಬೆಳಗಾವಿ, ಗುಮ್ಮಟನಗರಿ ವಿಜಯಪುರ, ಗದಗ, ಬಾಗಲಕೋಟೆಯ ಹಲವು ಗ್ರಾಮಗಳಲ್ಲಿ ನೆರೆ ಸೃಷ್ಟಿಯಾಗಿ ಎಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ.
ಇದೀಗ ವರುಣಾರ್ಭಟಕ್ಕೆ ತತ್ತರಿಸಿರುವ ಗ್ರಾಮಗಳಿಗೆ ಸಿಎಂ ಯಡಿಯೂರಪ್ಪ ಅವರು ನಾಳೆ ಭೇಟಿ ನಿಡಲಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬೆಳಿಗ್ಗೆ 9ಕ್ಕೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿಎಂ ತೆರಳಲಿದ್ದಾರೆ. ಬಳಿಕ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಸಚಿವರು, ಸಂಸದರು ಶಾಸಕರ ಜತೆಗೆ 10.30ಕ್ಕೆ ಸಿಎಂ ಸಭೆ ನಡೆಸಲಿದ್ದಾರೆ.
ಇದಾದ ನಂತರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ತದ ನಂತರದಲ್ಲಿ ವಿಜಯಪುರದ ಲಾಲ್ ಬಹಾದ್ದೂರ್ ಜಲಾಶಯಕ್ಕೆ ಭೇಟಿ ನೀಡಲಿದ್ದು, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಯ ಜನಪ್ರತಿನಿಧಿಗಳ ಜೊತೆಗೆ ಆಲಮಟ್ಟಿ ಅತಿಥಿ ಗೃಹದಲ್ಲಿ ಸಭೆ ನಡೆಸಲಿದ್ದಾರೆ. ಬಳಿಕ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೂ ತೆರಳಿ ಅಲ್ಲಿಯೂ ಸಹ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಸಿಎಂ ಬಿಎಸ್ ವೈ.








