ರಾಜ್ಯದಲ್ಲಿ ಇತ್ತೀಚೆಗೆ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಾರಿಯಾದ GST ನೋಟಿಸ್ ವಿಚಾರ ಸುದ್ದಿಯಲ್ಲಿ ಇದೆ. ₹40 ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸಿದ್ದಾರೆ ಎಂದು ಕೆಲ ವರ್ತಕರಿಗೆ ನೋಟಿಸ್ ನೀಡಿದ ಕಾರಣದಿಂದ ವ್ಯಾಪಾರ ವಲಯದಲ್ಲಿ ಭಾರಿ ತಳಮಳ ಸೃಷ್ಟಿಯಾಗಿದೆ. ಇದನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ವರ್ತಕ ಸಂಘದ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೋಟಿಸ್ ಪಡೆದಿರುವ ವರ್ತಕರಿಂದ 3 ವರ್ಷಗಳ ಹಿಂದಿನ ಬಾಕಿ ತೆರಿಗೆಯನ್ನು ವಸೂಲಿ ಮಾಡುವ ಪ್ರಶ್ನೆಯೇ ಇಲ್ಲ. ಅವರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ಸರ್ಕಾರ ಕಾರ್ಯನಿರ್ವಹಿಸುತ್ತದೆ. ವರ್ತಕರಿಗೆ ಶಾಂತಿ ಮತ್ತು ವಿಶ್ವಾಸ ಮೂಡುವಂತೆಯೇ ಕ್ರಮ ಕೈಗೊಳ್ಳಲಾಗುತ್ತದೆ, ಎಂದು ಸ್ಪಷ್ಟಪಡಿಸಿದರು.
ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲಿ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು. ನೋಟೀಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಸರ್ಕಾರ ವಸೂಲು ಮಾಡಲ್ಲ. ಅದನ್ನು ಮನ್ನಾ ಮಾಡಲಾಗುವುದು. ಆದರೆ, ಅವರೆಲ್ಲರೂ ಕಡ್ಡಾಯವಾಗಿ GST ನೋಂದಣಿ ಮಾಡಬೇಕು ಎಂದು ಹೇಳಿದ್ದಾರೆ
ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿರುವುದು ಸಾವಿರಾರು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ..








