ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸಿದರು.
ಈ ವೇಳೆ ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಕೂಡ ಭಾಗವಹಿಸಿದ್ದರು. ಸೇತುವೆ ಮೇಲೆ ನಿಂತು ವಿಶೇಷ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ, ತುಂಗಭದ್ರೆಗೆ ಕಳಶದ ನೀರು ಸಮರ್ಪಿಸಿದರು. ಆನಂತರ ಬಾಗಿನ ಅರ್ಪಿಸಿದರು.
ಸಿದ್ದರಾಮಯ್ಯ ಅವರಿಗೆ ಪೊಲೀಸ್ ಪಡೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಜಮೀರ್ ಅಹಮ್ಮದ್, ಶಿವರಾಜ್ ತಂಗಡಗಿ, ಶರಣಪ್ರಕಾಶ್ ಪಾಟೀಲ್ ಸಾಥ್ ನೀಡಿದರು. ಬಳ್ಳಾರಿ ಸಂಸದ ತುಕಾರಾಂ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸೇರಿದಂತೆ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು ಇದ್ದರು.
ಅಲ್ಲದೇ, ಸ್ಥಳದಲ್ಲಿ ಪೊಲೀಸರು ಹಾಗೂ ಶಾಸಕರ ಮಧ್ಯೆ ವಾಗ್ವಾದ ನಡೆಯಿತು. ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ ತಮ್ಮ ಬೆಂಬಲಿಗರ ಜೊತೆಗೆ ತುಂಗಭದ್ರಾ ಡ್ಯಾಂನ ಮುಖ್ಯ ಗೇಟ್ ಹತ್ತಿರ ಬಂದಿದ್ದರು. ಆಗ ಶಾಸಕರ ಬೆಂಬಲಿಗರನ್ನು ಪೊಲೀಸರು ಬಿಡಲಿಲ್ಲ. ಇದರಿಂದಾಗಿ ರೊಚ್ಚಿಗೆದ್ದ ಶಾಸಕರು ವಾಗ್ವಾದ ನಡೆಸಿದರು. ಸಿಎಂ ಅವರನ್ನು ಕೂಡ ಗೇಟ್ ಬಳಿಯೇ ಭೇಟಿ ಮಾಡಿದರು.
ಇದೇ ಮೊದಲ ಬಾರಿಗೆ ತುಂಗಭದ್ರಾ ಡ್ಯಾಂ ಭರ್ತಿಯಾಗಿದೆ. 19ನೇ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನದಿ ಪಾಲಾಗಿತ್ತು. ಅಂದಾಜು 40 ಟಿಎಂಸಿ ನೀರು ವ್ಯರ್ಥವಾಗಿ ನದಿಗೆ ಹರಿದಿತ್ತು. ಇದು ಜಲಾಶಯ ನಂಬಿಕೊಂಡಿದ್ದ ಅನ್ನದಾತರು, ಕುಡಿಯೋ ನೀರಿಗೆ ಭರಸಿಡಿಲು ಬಂದಂತಾಗಿತ್ತು. ಈ ವೇಳೆ ಗೇಟ್ ದುರಸ್ಥಿ ಕಾರ್ಯ ಮಾಡಿದವರನ್ನು ಸನ್ಮಾನಿಸಲಾಯಿತು.








