ವಿಜಯಪುರ : ಶೀಘ್ರದಲ್ಲೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಪ್ರತಿಕ್ರಿಯಿಸಿ, ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ 3 ವರ್ಷಗಳ ಕಾಲ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸಲು ಸಿಎಂ ಯಾರಿಂದಲೂ ಕಲಿತುಕೊಳ್ಳಬೇಕಿಲ್ಲ. 4 ದಶಕಗಳ ಕಾಲ ಸುದೀರ್ಘವಾಗಿ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಮುಖ್ಯಮಂತ್ರಿ 3 ವರ್ಷಗಳ ಕಾಲ ಮುಂದುವರೆಯುತ್ತಾರೆ. ಯಾರಿಗೂ ಅನುಮಾನ ಬೇಡ ಎಂದು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟ ಹೆಬ್ಬಾರ್, ಸಿದ್ದರಾಮಯ್ಯನವರು ಹಿರಿಯ ನಾಯಕರು, ಅವರಿಗೆ ನಾನು ವಿನಂತಿ ಮಾಡುತ್ತೇನೆ. ಪಕ್ಷವಾಗಿ ಕೊರೊನಾ ಬರೋದಿಲ್ಲ, ಪಕ್ಷದ ಮಟ್ಟದಲ್ಲಿ ಕೊರೊನಾ ಅಳೆಯಬಾರದು. ಕೊರೊನಾವನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಎಂಬ ಪಕ್ಷದ ಮಟ್ಟದಲ್ಲಿ ಅಳೆಯಬಾರದು. ಎಲ್ಲಾ ಪಕ್ಷಗಳ ಶಾಸಕರು ಕೊರೊನಾಗೆ ಒಳಗಾಗಿದ್ದಾರೆ. ಕೋವಿಡ್‌ಅನ್ನು ಕಾಂಗ್ರೆಸ್ ಕಣ್ಣಿನಿಂದ ನೋಡಬಾರದು ಎಂದರು.