ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರು ನೇಹಾ ಹಿರೇಮಠ (Neha Hiremath) ತಂದೆ-ತಾಯಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ, 120 ದಿನಗಳಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ನೇಹಾ ಕುಟುಂಬವನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಯಾಮಗಳಲ್ಲಿಯೂ ತನಿಖೆ ನಡೆಸಲು ಸೂಚಿಸಿದ್ದೇನೆ. ಇದರ ತನಿಖೆಯನ್ನು ಸಿಐಡಿಗೆ ವಹಿಸಿದ್ದೇವೆ. ಇದೊಂದು ದುರದೃಷ್ಟ ಘಟನೆಯಾಗಿದೆ. ಈ ಘಟನೆಯನ್ನು ಎಲ್ಲರೂ ಖಂಡಿಸುತ್ತೇವೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದು ಅತ್ಯಂತ ಕಠಿಣ ಶಿಕ್ಷೆ ಇದೆಯೋ ಅದನ್ನೇ ಈ ಪ್ರಕರಣದ ಆರೋಪಿಗೆ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಆದರೆ, ಈ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾನು ಸಾಂತ್ವನ ಹೇಳಲು ಬಂದಿದ್ದೇನೆ. ಇಲ್ಲಿ ರಾಜಕೀಯದ ಕುರಿತು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೊಂಡಿದ್ದಾರೆ. ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್ ನಲ್ಲಿ ಟ್ರಯಲ್ ನಡೆಯುತ್ತೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಶಿಕ್ಷೆ ಆಗುತ್ತದೆ ಎಂದು ತಂದೆಗೆ ಹೇಳಿದ್ದಾರೆ.