ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ಕಾಲೇಜುಗಳು ಬಂದ್ ಆಗಿವೆ. ಹಾಗಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಕಷ್ಟವಾಗಿದೆ. ಇದನ್ನು ಸರಿದೂಗಿಸಲು ಆನ್ ಲೈನ್ ತರಗತಿಗಳ ಮೂಲಕ ಪಾಠವನ್ನು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಬಿಎಸ್ ವೈ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಯಾವುದೇ ರೀತಿಯ ತೊಂದರೆ ಆಗಬಾರದು. ಸಾಮಾನ್ಯ ತರಗತಿಗಳಿಗೆ ಹೋಲಿಸಿದರೇ ಆನ್ ಲೈನ್ ತರಗತಿಗಳಿಗೆ ಕಡಿಮೆ ವೆಚ್ಚವಾಗುತ್ತದೆ. ಲಾಕ್ ಡೌನ್ ಆಗುವ ಮೊದಲು ಶೇ 79 ರಷ್ಟು ಸಿಲಬಸ್ ಮುಕ್ತಾಯವಾಗಿತ್ತು. ಹಾಗಾಗಿ ಉಳಿದ ಶೇ 21% ಸಿಲಬಸ್ ಆನ್ ಲೈನ್ ಮೂಲಕ ಮಾಡಿ ಮಗಿಸಿ ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೆ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ, ಗೆಟ್ ಸಿಇಟಿ ಗೋ ಎಂಬ ಯುಟ್ಯೂಬ್ ಮೂಲಕ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿದೆ. ಒಟ್ಟು 13600 ವಿದ್ಯಾರ್ಥಿಗಳು ಯೂಟ್ಯೂಬ್ ಚಂದಾದಾರರಾಗಿದ್ದಾರೆ. 90 ಸಾವಿರ ಲಾಗಿನ್ ಆಗಿದೆ. ಅಲ್ಲದೆ ಈ ಪೋರ್ಟಲ್ ಗೆ ನಾಲ್ಕು ಸ್ಟಾರ್ ಗಳು ಸಿಕ್ಕಿವೆ. ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಲ್ಯಾಪ್ ಟಾಪ್ ವಿತರಿಸಲಾಗಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕೆ ಅನುಷ್ಠಾನಕ್ಕೆ ಬರಲಿದೆ. ಲಾಕ್ ಡೌನ್ ಸಮಯದಲ್ಲಿ ಡಿಜಿಟಲ್ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮೈತ್ರಿ ಸಹಾಯವಾಣಿ ಪೋರ್ಟಲ್ ನಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ. ಯುಜಿಸಿ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಜೂನ್ 15ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಬಾರಿ ಬೇಸಿಗೆ ರಜೆಯನ್ನು ಮೊಟಕುಗೊಳಿಸಲಾಗುತ್ತಿದೆ.
ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು ವೆಬ್ಎಕ್ಸ್, ಸ್ಕೈಪ್ ಹಾಗೂ ಇತರೆ ಆನ್ಲೈನ್ ಪ್ಲಾಟ್ ಫಾರಂ ಮೂಲಕ 30 ಸಾವಿರ ಆನ್ ಲೈನ್ ಕ್ಲಾಸ್ ಗಳನ್ನು ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್ ಹಾಗೂ ಟೆಲಿಗ್ರಾಂ ಮೂಲಕ 85% ರಷ್ಟು ವಿದ್ಯಾರ್ಥಿಗಳಿಗೆ ಇ-ನೋಟ್ಸ್, ಪಿಪಿಟಿ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ. ಜ್ಞಾನನಿಧಿ ಯುಟ್ಯೂಬ್ ಮೂಲಕ 65 ವಿಷಯಗಳ 7,074 ಬೋಧನಾ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ ಎಂದು ಹೇಳಿದರು.








