ಗಲ್ವಾನ್ ಕಣಿವೆಯ ಹುತಾತ್ಮ ವೀರ ಯೋಧರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರಧಾನ
ಕಳೆದ ವರ್ಷ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಇಂಡಿಯನ್ ಆರ್ಮಿ ಮಧ್ಯೆ ಪರಸ್ಪರ ಘರ್ಷಣೆ ನಡೆದಿತ್ತು. ಈ ದಾಳಿಯಲ್ಲಿ ಧೈರ್ಯವಾಗಿ ಮುಂದೆ ನಿಂತು ಚೀನಾ ಸೈನಿಕರನ್ನ ಹಿಮ್ಮೆಟ್ಟಿಸಿದ್ದ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕುಮಲ್ಲ ಸಂತೋಷ್ ಬಾಬು ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಮರಣೋತ್ತರವಾಗಿ ಮಹಾವೀರ ಚಕ್ರವನ್ನ ಪ್ರಧಾನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ದೇಶದ ಉನ್ನತ ಸೇನಾಧಿಕಾರಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಬಾಬು ಅವರ ಪತ್ನಿ ಬಿ ಸಂತೋಷಿ ಮತ್ತು ತಾಯಿ ಮಂಜುಳಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಮಹಾವೀರ ಚಕ್ರವು ಪರಮವೀರ ಚಕ್ರದ ನಂತರ ಎರಡನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಸೈನಿಕರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನಪ್ಪಿದ ಇತರ ನಾಲ್ವರು ಸೈನಿಕರಾದ ನಾಯಿಬ್ ಸುಬೇದಾರ್ ನುದುರಾಮ್ ಸೊರೆನ್, ಹವಾಲ್ದಾರ್ (ಗನ್ನರ್) ಕೆ ಪಳನಿ, ನಾಯಕ್ ದೀಪಕ್ ಸಿಂಗ್ ಮತ್ತು ಸಿಪಾಯಿ ಗುರ್ತೇಜ್ ಸಿಂಗ್ ಅವರಿಗೆ ಮರಣೋತ್ತರವಾಗಿ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೀರ ಚಕ್ರವು ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾಗಿದೆ.
ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಸೈನಿಕರಿಗಾಗಿ ಭಾರತೀಯ ಸೇನೆಯು ಪೂರ್ವ ಲಡಾಖ್‌ನಲ್ಲಿ ಪೋಸ್ಟ್ 120 ರಲ್ಲಿ ‘ಗಾಲಂಟ್ಸ್ ಆಫ್ ಗಾಲ್ವಾನ್’ ಎಂಬ ಸ್ಮಾರಕವನ್ನು ನಿರ್ಮಿಸಿದೆ.








