ಕಾಮಿಡಿ.. ಜಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ… !
ವಿರಾಟ್ ಕೊಹ್ಲಿ.. ಅತ್ಯದ್ಭುತ ಬ್ಯಾಟ್ಸ್ ಮೆನ್.. ಹಾಗೇ ಯಶಸ್ವಿ ನಾಯಕ. ದಾಖಲೆಗಳ ಮೇಲೆ ದಾಖಲೆ ಬರೆಯುವ ವಿರಾಟ್ ಕೊಹ್ಲಿ ಹೆಸರಿಗೆ ಈಗಾಗಲೇ ಹತ್ತಾರು ದಾಖಲೆಗಳು ಅಂಟಿಕೊಂಡಿವೆ.
ಅದೇ ರೀತಿ ನಾಯಕನಾಗಿ ದೇಶಿ ಮತ್ತು ವಿದೇಶಿ ನೆಲದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಕೂಡ ಈಗ ವಿರಾಟ್ ಹೆಸರಿನಲ್ಲಿದೆ.
ಆದ್ರೆ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿರಬಹುದು. ಆದ್ರೆ ಅವರ ನಾಯಕತ್ವ ಸ್ವಭಾವವನ್ನು ನೋಡಿದಾಗ ಶಾಲಾ ತಂಡದ ನಾಯಕನಂತೆ ವರ್ತಿಸುತ್ತಿದ್ದಾರೆ.
ಆಕ್ರಮಣಕಾರಿ ಪ್ರವೃತ್ತಿ ಓಕೆ.. ಎದುರಾಳಿ ತಂಡದ ಆಟಗಾರರು ತಾಂಟಲು ಬಂದ್ರೆ ಅದಕ್ಕೆ ತಕ್ಕಂತೆ ತಾಂಟೂವುದು ಕೂಡ ವಿರಾಟ್ ಗೆ ಚೆನ್ನಾಗಿ ಗೊತ್ತು. ಹಾಗೇ ಸಹ ಆಟಗಾರರಿಗೆ ಸ್ಫೂರ್ತಿ ತುಂಬುದನ್ನು ಸಹ ಚೆನ್ನಾಗಿಯೇ ಅರಿತುಕೊಂಡಿದ್ದಾರೆ.
ಇನ್ನು ಏಕಾಂಗಿಯಾಗಿ ಹೋರಾಡುವುದನ್ನು ವಿರಾಟ್ ನನ್ನು ನೋಡಿ ಕಲಿಯಬೇಕಿದೆ. ಅಷ್ಟೊಂದು ಅದ್ಭುತ ಆಟಗಾರ, ನಾಯಕ. ಆದ್ರೆ ಕೆಲವೊಂದು ಬಾರಿ ವಿರಾಟ್ ಕೊಹ್ಲಿಯವರ ಹಾವಭಾವ ಎಲ್ಲೇ ದಾಟಿ ಹೋಗಿದ್ದು ಉಂಟು.
ನಾಯಕನಾದನವನು ಇಡೀ ತಂಡದ ಆಟಗಾರರನ್ನು ತನ್ನ ಹಿಡಿತದಲ್ಲಿಕೊಳ್ಳಬೇಕು. ಸಹ ಆಟಗಾರರನ್ನು ಸಂಯಮದಿಂದ ನೋಡಿಕೊಳ್ಳಬೇಕು. ಆದ್ರೆ ವಿರಾಟ್ ಹಾಗಲ್ಲ. ಸಹ ಆಟಗಾರರ ವರ್ತನೆಗಿಂತ ಒಂದು ಪಟ್ಟು ಹೆಚ್ಚು ಮೈಮರೆಯುತ್ತಾರೆ.
ಆದ್ರೆ ಇದು ಈಗ ಲೆಕ್ಕಕ್ಕೆ ಬರಲ್ಲ. ಯಾಕಂದ್ರೆ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಗೆಲುವಿನ ಅಲೆಯಲ್ಲಿ ತೇಲಾಡುತ್ತಿದೆ. ಅಂದ ಹಾಗೇ ಒಬ್ಬ ಆಟಗಾರನಾಗಿ ವಿರಾಟ್ ಕೊಹ್ಲಿ ತುಂಬಾನೇ ಇಷ್ಟವಾಗುತ್ತಾರೆ.
ಆದ್ರೆ ನಾಯಕನಾಗಿ ವಿರಾಟ್ ಕೊಹ್ಲಿ ಅಷ್ಟೊಂದು ಇಷ್ಟವಾಗಲ್ಲ. ಇದು ವಿರಾಟ್ ಅಭಿಮಾನಿಗಳನ್ನು ಕುಪಿತಗೊಳ್ಳುವಂತೆ ಮಾಡಬಹುದು. ಆಕ್ರಮಣಕಾರಿ ಪ್ರವೃತ್ತಿ ಇರಬೇಕು. ಆದ್ರೆ ಅತೀಯಾಗಿ ಇರಬಾರದು. ಇನ್ನು ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರು ಸ್ವಚ್ಚಂದವಾಗಿ ಆಡಲು ಹೆದರಿಕೊಳ್ಳುತ್ತಾರೆ.
ವಿರಾಟ್ ಬೇಗನೇ ಸಿಟ್ಟು ಮಾಡಿಕೊಳ್ಳುತ್ತಾರೆ. ತನ್ನ ಗೇಮ್ ಪ್ಲಾನ್ ವರ್ಕ್ ಔಟ್ ಆಗದೇ ಇದ್ದಾಗ ಸಹ ಆಟಗಾರರನ್ನು ತರಾಟೆಗೂ ತೆಗೆದುಕೊಳ್ಳುತ್ತಾರೆ. ಹೀಗೆ ಕೆಲವೊಂದು ಲೋಪದೋಷಗಳು ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿದೆ. ಹಾಗೇ ನೋಡಿದ್ರೆ, ಟೀಮ್ ಇಂಡಿಯಾವನ್ನು ಘಟಾನುಘಟಿ ಆಟಗಾರರು ಮುನ್ನೆಡೆಸಿದ್ದಾರೆ.
ಮನ್ಸೂರ್ ಆಲಿ ಖಾನ್ ಪಟೌಡಿ, ವೆಂಕಟರಾಘವನ್, ಸುನೀಲ್ ಗವಾಸ್ಕರ್, ಕಪಿಲ್ ದೇವ್, ದಿಲೀಪ್ ವೆಂಗ್ ಸರ್ಕಾರ್, ಮಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಮೊದಲಾದವರು ಮುನ್ನಡೆಸಿದ್ದಾರೆ.
ಅದ್ರಲ್ಲೂ ಸೌರವ್ ಗಂಗೂಲಿ ನಾಯಕತ್ವದ ಬಳಿಕ ಟೀಮ್ ಇಂಡಿಯಾ ಹೊಸ ಕ್ರಾಂತಿಯನ್ನೇ ಸೃಷ್ಠಿಸಿತ್ತು. ಆದಾದ ಬಳಿಕ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ (ಟೆಸ್ಟ್ ಕ್ರಿಕೆಟ್) ಕೂಡ ಗಂಭೀರವಾಗಿಯೇ ತಂಡವನ್ನು ಮುನ್ನಡೆಸಿದ್ದರು.
ಇನ್ನು ಮಹೇಂದ್ರ ಸಿಂಗ್ ಧೋನಿ ಕೂಲ್ ಕ್ಯಾಪ್ಟನ್ ಅಂತನೇ ಫೇಮಸ್ ಆಗಿದ್ದರು. ಈ ಮೇಲಿನ ಆಟಗಾರರ ನಾಯಕತ್ವಕ್ಕೂ ವಿರಾಟ್ ಕೊಹ್ಲಿಯ ನಾಯಕತ್ವಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ನಾಯಕತ್ವ ಶೈಲಿ. ಆದ್ರೂ ಮೈದಾನದಲ್ಲಿ ವಿರಾಟ್ ಕೊಹ್ಲಿಯಂತೆ ಎಲ್ಲೂ ಕೂಡ ಮೈಮರೆತಿಲ್ಲ.
ಸೌರವ್ ಗಂಗೂಲಿ ಕೆಲವೊಂದು ಪಂದ್ಯಗಳಲ್ಲಿ ಮೈಮರೆತಿದ್ರು. ಆದ್ರೂ ಗಂಭೀರತೆಯನ್ನು ಕಾಪಾಡಿಕೊಂಡಿದ್ದರು. ಆದ್ರೆ ವಿರಾಟ್ ಕೊಹ್ಲಿಯ ಸ್ವಭಾವವೋ ಏನೋ.. ಶಾಲಾ ತಂಡದ ನಾಯಕನಂತೆ ಕೆಲವೊಂದು ಬಾರಿ ವರ್ತಿಸುತ್ತಾರೆ. ಇದು ಅಷ್ಟೊಂದು ಸಮಂಜಸವಲ್ಲ.
ಈ ಹಿಂದೆ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ದೇಶಿ ಆಟಗಾರರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಯಶಸ್ಸು ಸಾಧಿಸಿರಬಹುದು. ಆದ್ರೆ ಮಾದರಿ ನಾಯಕನಾಗಲು ಇನ್ನಷ್ಟು ಪಳಗಬೇಕಿದೆ.
ಇನ್ನಷ್ಟು ಕಲಿತುಕೊಳ್ಳಬೇಕಿದೆ. ಹೀಗಾಗಿ ವಿರಾಟ್ ಕೊಹ್ಲಿ ಕೆಲವೊಂದು ಬಾರಿ ಕಾಮಿಡಿ ನಾಯಕನಾಗಿ ಕಾಣುತ್ತಾರೆ. ಜಾಲಿ ಕ್ಯಾಪ್ಟನ್ ಆಗಿ ಕಾಣ್ತಾರೆ. ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟಾಗ ಅದ್ಭುತ ನಾಯಕನಾಗಿ ಕಾಣುತ್ತಾರೆ. ಆದ್ರೂ ವಿರಾಟ್ ಕೊಹ್ಲಿ ನಾಯಕತ್ವದ ಗುಣಗಳನ್ನು ನೋಡಿದಾಗ ಅಷ್ಟಕ್ಕಷ್ಟೇ ಅಂತ ಅನ್ಸುತ್ತೆ.
