ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಇದೇ ಜೂನ್ 29 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾ ಎದುರು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸಿಎಂ ಬಿಎಸ್ ವೈಗೆ 7 ಪುಟಗಳ ಪತ್ರ ಬರೆದಿರುವ ದೇವೇಗೌಡ, ‘ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡರು ಕೆ.ಆರ್. ಪೇಟೆಯ ಜೆಡಿಎಸ್ ಕಾರ್ಯಕರ್ತರಿಗೆ ಕಿರಿಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ನಿಮ್ಮ ಗೃಹಕಚೇರಿ ಕೃಷ್ಣಾ ಮುಂದೆ ಧರಣಿ ಕೂರುತ್ತೇನೆ’ ಎಂದು ಎಚ್ಚರಿಸಿದ್ದಾರೆ.
ಪತ್ರದಲ್ಲಿ ಏನಿದೆ?
‘ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತವಾರಿ ಸಚಿವರು ಜೆಡಿಎಸ್ ಕಾರ್ಯಕರ್ತ ಎಚ್.ಟಿ. ಮಂಜು ಎಂಬುವವರಿಗೆ ಕಿರುಕುಳ ನೀಡುತ್ತಿದ್ದಾರೆ. ಮಂಜುಗೆ ಸೇರಿದ ಸ್ಟೋನ್ ಕ್ರಷರ್, ಕ್ವಾರಿ ಮೈನಿಂಗ್ ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಎಲ್ಲ ಇಲಾಖೆಗಳ ಅನುಮತಿ ಇದ್ದರೂ ದುರುದ್ದೇಶದಿಂದ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ನಾನೇ ನಿಮ್ಮ ಗಮನಕ್ಕೆ ತಂದಿದ್ದೆ. ಅಂದು ನಾರಾಯಣಗೌಡಗೆ ಬುದ್ಧಿವಾದ ಹೇಳುವುದಾಗಿ ತಿಳಿಸಿದ್ರಿ. ಆದರೂ ಏನೂ ಪ್ರಯೋಜನವಾಗಿಲ್ಲ’.
‘ನಾರಾಯಣಗೌಡರ ಕಿರುಕುಳದ ಬಗ್ಗೆ ದೂರು ನೀಡಲು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರ ಗಮನಕ್ಕೆ ತರಲು ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಜಿಲ್ಲಾಧಿಕಾರಿಯೂ ಉದ್ದಟತನ ತೋರಿದ್ದಾರೆ’ ಎಂದು ದೇವೇಗೌಡರು ಪತ್ರದಲ್ಲಿ ಆರೋಪಿಸಿದ್ದಾರೆ.
‘ನಾರಾಯಣಗೌಡರಿಂದ ಕಿರುಕುಳ ನಿರಂತರವಾಗಿದ್ದು, ಇದಕ್ಕೆ ಬ್ರೇಕ್ ಹಾಕಿಸುವ ನಿಟ್ಟಿನಲ್ಲಿ ಜೂ.29ರಂದು ಸಿಎಂ ಗೃಹ ಕಚೇರಿ ಮುಂದೆ ಧರಣಿಗೆ ಕೂರುತ್ತೇವೆ. ಅಂದು ಜೆಡಿಎಸ್ ಶಾಸಕರು ಮತ್ತು ಮುಖಂಡರೂ ಪಾಲ್ಗೊಳ್ಳಲಿದ್ದಾರೆ’ ಎಂದು ಹೆಚ್ ಡಿ ದೇವೇಗೌಡ ಸಿಎಂಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.








