ಬೈ ಟೂ ಲವ್ ಸಿನಿಮಾ ಚಿತ್ರದ ನಾಯಕನ ವಿರುದ್ಧ ದೂರು ದಾಖಲು Saaksha Tv
ಬೆಂಗಳೂರು: ‘ಬೈ ಟೂ ಲವ್’ ಸಿನಿಮಾ ಚಿತ್ರ ಇಂದು ರಿಲೀಸ್ ಆಗಿದ್ದು, ಈ ಚಿತ್ರದ ನಾಯಕನಿಗೆ ಸಿಹಿ ಚೊತೆಗೆ ಕಹಿ ಸುದ್ದಿಯೊಂದು ದೊರೆತಿದೆ. ಹೌದು ನಟ ಧನ್ವೀರ್ ಅವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೌನ್ಸರ್ ಜತೆ ಸೇರಿ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ದೂರು ದಾಖಲಾಗಿದೆ. ಹಲ್ಲೆಗೆ ಒಳಗಾದ ಅಭಿಮಾನಿ ಚಂದ್ರಶೇಖರ್ ದೂರು ದಾಖಲು ಮಾಡಿದ್ದಾರೆ.
ಬೆಂಗಳೂರಿನ ಎಸ್.ಸಿ. ರಸ್ತೆಯ ಅನುಪಮಾ ಥಿಯೇಟರ್ ಬಳಿ ಗುರುವಾರ ತಡರಾತ್ರಿ ಸ್ನೇಹಿತನ ಜೊತೆ ಊಟ ಮುಗಿಸಿ ಚಂದ್ರಶೇಖರ್ ಮನೆಗೆ ತೆರಳುತ್ತಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕಂಡಾಗ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಂದಾಗುತ್ತಾರೆ. ಅದೇ ರೀತಿ ಧನ್ವೀರ್ ಕಂಡಾಗ ಫೋಟೋ ತೆಗೆಸಿಕೊಳ್ಳೋಕೆ ಚಂದ್ರಶೇಖರ್ ಮುಂದಾಗಿದ್ದಾರೆ. ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಲಿಲ್ಲ.
ಇದು ಚಂದ್ರಶೇಖರ್ಗೆ ಬೇಸರ ತರಿಸಿದೆ. ಆಗ ಚಂದ್ರಶೇಖರ್ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಧನ್ವೀರ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಈ ವೇಳೆ ಧನ್ವೀರ್ ಜತೆ ಬೌನ್ಸರ್ಸ್ ಕೂಡ ಸೇರಿದ್ದರು ಎನ್ನಲಾಗಿದೆ. ಹಲ್ಲೆಗೊಳಗಾದ ಚಂದ್ರಶೇಖರ್ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದು, ಚಂದ್ರಶೇಖರ್ ದೇಹಕ್ಕೆ ಗಾಯಗಳಾಗಿವೆ.









