ಈಗ ಭೂಮಂಡಲದಲ್ಲಿ ಯುದ್ಧದ ಕಾರ್ಮೋಡ ಆವರಿಸಿದಂತಿದೆ. ರಷ್ಯಾ-ಉಕ್ರೇನ್ ಮಧ್ಯೆ ಇನ್ನೂ ವಾರ್ ನಡೆಯುತ್ತಿದೆ. ಇನ್ನೊಂದೆಡೆ ಈಗ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ ಆರಂಭವಾದಂತಿದೆ. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧಕ್ಕೆ ಹಮಾಸ್ ಬಂಡುಕೋರರ ಗುಂಪು ಕಾರಣವಾಗಿದೆ. ಈ ಸಂದಿಗ್ಧ ಸನ್ನಿವೇಶದ ಹೊತ್ತಿನಲ್ಲೇ ಮತ್ತೊಂದು ಯುದ್ಧದ ಭೀತಿ ಎದುರಾಗಿದೆ.
ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ವಾರದ ಹಿಂದೆ ಫೌದ್ ಶೂಕೂರ್ ರಾಕೆಟ್ ದಾಳಿ ನಡೆಸಿ, 12 ಯುವಕರ ಹತ್ಯೆಗೆ ಕಾರಣವಾಗಿದ್ದ. ಇದು ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಲೆಬನಾನಿನ ಗುಂಪು ಹಿಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಹಿಜ್ಬುಲ್ಲಾ ಮೇಲೆ ತೀವ್ರವಾಗಿ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಹಿಂದಿನ ವರ್ಷವಷ್ಟೇ ಹಮಾಸ್‌ನ ದಾಳಿಯು ಗಾಜಾದಲ್ಲಿ ಯುದ್ಧವನ್ನು ಹುಟ್ಟುಹಾಕಿತ್ತು. ಈಗ ಮತ್ತೊಂದು ಸಂಘರ್ಷದ ಸೂಚನೆ ನೀಡಿದೆ.
ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ದಕ್ಷಿಣ ಇಸ್ರೇಲ್‌ನಲ್ಲಿ ದಾಳಿ ಮಾಡಿ ಗಾಜಾ ಯುದ್ಧಕ್ಕೆ ಕಾರಣವಾಯಿತು. ಅದಾದ ಒಂದು ದಿನದ ನಂತರ (ಅ.8) ಇಸ್ರೇಲ್-ಹಿಜ್ಬುಲ್ಲಾ ಗಡಿಯಲ್ಲಿ ಹಿಂಸಾಚಾರ ನಡೆಯಿತು. ಹಿಜ್ಬುಲ್ಲಾವನ್ನು ಇರಾನ್ ಬೆಂಬಲಿತ ಅತ್ಯಂತ ಶಕ್ತಿಶಾಲಿ ಸದಸ್ಯ ಎಂದು ಪರಿಗಣಿಸಲಾಗಿದೆ. ಗಾಜಾದಲ್ಲಿ ಕದನ ವಿರಾಮ ಜಾರಿಗೆ ಬರದ ಹೊರತು ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಹಿಜ್ಬುಲ್ಲಾ ತಿಳಿಸಿತ್ತು. ಈಗಾಗಲೇ ಇಸ್ರೇಲ್ ಮತ್ತು ಹಿಜ್ಬುಲ್ಲಾ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿವೆ. 2006ರಲ್ಲಿ ಕೊನೆ ಸಂಘರ್ಷ ಎದುರಿಸಿದ್ದವು. ಈಗ ಮತ್ತೆ ಅಂತಹುದೇ ವಾತಾವರಣ ಸೃಷ್ಟಿಯಾಗಿದೆ.
ಈಗಾಗಲೇ ಇಸ್ರೇಲ್-ಹಿಜ್ಬುಲ್ಲಾ ಕಿತ್ತಾಟದಿಂದ ಗಡಿಯ ಎರಡೂ ಬದಿಗಳಲ್ಲಿ ನೂರಾರು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಇಸ್ರೇಲ್-ಹಿಜ್ಬುಲ್ ನಡುವೆ ಉದ್ವಿಗ್ನತೆ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಲೆಬನಾನ್ ತೊರೆಯುವಂತೆ ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ ನೀಡಿದೆ. ಮುಂದಿನ ಸೂಚನೆ ನೀಡುವವರೆಗೆ ಭಾರತೀಯರು ಲೆಬನಾನ್ ಗೆ ಮರಳದಂತೆ ಎಚ್ಚರಿಕೆ ನೀಡಲಾಗಿದೆ.








