ಧರ್ಮಕ್ಕೆ ಅಪಮಾನ, ಪಿತೂರಿ ಖಂಡಿಸಿ ರಾಜ್ಯ ಬಿಜೆಪಿ ನಡೆಸಿದ್ದ ಧರ್ಮಸ್ಥಳ ಚಲೋ ಸಮಾವೇಶದಲ್ಲಿ ಪಕ್ಷದ ಒಳಗಿನ ಭಿನ್ನಮತ ಬಹಿರಂಗಗೊಂಡಿದೆ. ಕರಾವಳಿಯ ಪ್ರಮುಖ ನಾಯಕರಿಗೆ ಭಾಷಣಕ್ಕೆ ಅವಕಾಶ ನೀಡದಿರುವುದು ಇದಕ್ಕೆ ಕಾರಣವಾಗಿದೆ.
ಭಾಷಣಕ್ಕೆ ಅವಕಾಶ ಸಿಗದೆ ಹೊರನಡೆದ ನಾಯಕರು
ಸಮಾವೇಶದಲ್ಲಿ ರಾಜ್ಯ ಮಟ್ಟದ ನಾಯಕರಾದ ನಳಿನ್ ಕುಮಾರ್ ಕಟೀಲ್, ಸುನಿಲ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಡಿ.ವಿ. ಸದಾನಂದಗೌಡ, ತೇಜಸ್ವಿ ಸೂರ್ಯ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಭಾಷಣ ಮಾಡಲು ಅವಕಾಶ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡ ಈ ನಾಯಕರು ವೇದಿಕೆಯಿಂದಲೇ ಹೊರನಡೆದರು.
ರಾಜ್ಯಾಧ್ಯಕ್ಷ ವಿಜಯೇಂದ್ರರ ಸಮಜಾಯಿಷಿ
ಪರಿಸ್ಥಿತಿ ಕೈಮೀರುತ್ತಿದ್ದಂತೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಭಾಷಣ ಮಾಡುವಾಗ, “ದಯವಿಟ್ಟು ನಮ್ಮನ್ನು ಕ್ಷಮಿಸಿ” ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೂ, ಪಕ್ಷದೊಳಗಿನ ಬಿಕ್ಕಟ್ಟು ಈ ಘಟನೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಂತಾಗಿದೆ.
ಈ ಸಮಾವೇಶವು ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಲು ಆಯೋಜಿಸಲಾಗಿತ್ತು. ಆದರೆ, ಸಮಾವೇಶವೇ ಪಕ್ಷದ ಆಂತರಿಕ ಭಿನ್ನಮತದ ವೇದಿಕೆಯಾಗಿ ಪರಿಣಮಿಸಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.








