Bangalore | ಪ್ರವಾಹದಲ್ಲೂ ರಾಜಕಾರಣ ಜೋರು!
ಭಾರಿ ಮಳೆಗೆ ಬೆಂಗಳೂರಿನಲ್ಲಿ ಪ್ರವಾಹ
ರಾಜ್ಯ ಕಾಂಗ್ರೆಸ್ – ಬಿಜೆಪಿ ಪರಸ್ಪರ ಟೀಕೆ
ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ – ಬಿಜೆಪಿ ಜಟಾಪಟಿ
ಭಾರಿ ಮಳೆಗೆ ಬ್ರ್ಯಾಂಡ್ ಬೆಂಗಳೂರು ಬರ್ದಾರ್
ಬೆಂಗಳೂರು : ಭಾರಿ ಮಳೆಗೆ ಬ್ರ್ಯಾಂಡ್ ಬೆಂಗಳೂರು, ಬರ್ಬಾದ್ ಆಗಿ ಹೋಗಿದೆ.
ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಅವ್ಯವಸ್ಥೆ ಬಟ್ಟಂಬಯಲಾಗಿದೆ.
ಧಾರಾಕಾರ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿದ್ದು, ಜನರು ಪರದಾಟ ನಡೆಸುತ್ತಿದ್ದಾರೆ.
ಒಂದು ಕಡೆ ಧಾರಾಕಾರ ಮಳೆ, ಮತ್ತೊಂದು ಕಡೆ ಅಧಿಕಾರಿಗಳ ಬೇಜವಾಬ್ದಾರಿಗೆ ಜನರು ಬೀದಿಗೆ ಬಂದಿದ್ದಾರೆ.
ಇಂತಹ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಧಾವಿಸಬೇಕಾಗಿದ್ದ ರಾಜಕಾರಣಿಗಳು ತಮ್ಮ ಬೇಳೆಯನ್ನ ಬೇಯಿಸಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ – ರಾಜ್ಯ ಕಾಂಗ್ರೆಸ್ ಕಚ್ಚಾಡುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ಗೊತ್ತಿಲ್ಲ. ಈ ಅವಾಂತರಕ್ಕೆ ಸರ್ಕಾರವೇ ನೇರ ಹೊಣೆ ಎಂದು ಟೀಕೆ ಮಾಡಿದ್ದಾರೆ.
ಇದಕ್ಕೆ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ತಿರುಗೇಟು ನೀಡಿದ್ದು, ಬೆಂಗಳೂರಿನ ಈ ಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದೆ.
ಅಂದಹಾಗೆ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಧೋ ಎಂದು ಸುರಿಯುತ್ತಿರುವ ಮಳೆಗೆ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ನಾಳೆ ಕೂಡ ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.








